ಮೂಡಿಗೆರೆ : ಕೊರೋನ ಕ್ವಾರಂಟೈನ್ ಒಳಗಿನ ನೋವನ್ನ ಬಿಚ್ಚಿಟ್ಟ ಮುಂಬೈ ರಿಟರ್ನ್…

798
firstsuddi
  • ರಾಘವೇಂದ್ರ ಕೆಸವಳಲು
    ಸಂಪಾದಕರು ಫಸ್ಟ್ ಸುದ್ದಿ ನ್ಯೂಸ್

ಮೂಡಿಗೆರೆ : ಮೊನ್ನೆ ಕಚೇರಿ ಕೆಲಸ ಮುಗಿಸಿ ಮನೆ ಕಡೆ ಹೊರಟೆ. ನಮ್ಮ ಹಿರಿಯ ಪತ್ರಕರ್ತ ಸೋಮಣ್ಣ ಹಾಗೂ ಕಡಿದಾಳ್ ಬ್ರಿಜೇಶ್ ರಾಘು…. ಆಸ್ಪತ್ರೆ ಹತ್ರ ಬಾ ಅಂದಿದ್ದು ತಟ್ಟನೆ ನೆನಪಾಗಿ ಕಾರನ್ನ ಆಸ್ಪತ್ರೆಯತ್ತ ತಿರುಗಿಸಿದೆ. ನಾನು ಹಾಗೂ ನನ್ನ ಜೊತೆ ಇದ್ದ ಟಿವಿ ವರದಿಗಾರಮಿತ್ರ ಪ್ರಶಾಂತ್ ಮುಗ್ರಹಳ್ಳಿ ಹಾಗೂ ಸುಧೀರ್ ಮೊದಲಮನೆ ಕಾರು ಇಳಿಯುವುದಕ್ಕೂ ಮುಂಚೆಯೇ ಆಂಬುಲೆನ್ಸ್ನಿಂದ ಸುಮಾರು ಹದಿನೈದು ಜನ ದಡ-ದಡ ಇಳಿದರು. ನನಗೆ ನೋಡಿ ಶಾಕ್ ಆಯ್ತು. ಕೊರೊನ ನಿಯಂತ್ರಣಕ್ಕೆ ಸಾಮಾಜಿಕ ಅಂತರವೇ ಮದ್ದು ಅಂತ ಸರ್ಕಾರ ಸಾರಿ ಹೇಳುತ್ತಿದೆ. ಹೀಗಿರುವಾಗ ಸರ್ಕಾರಿ ಆಂಬುಲೆನ್ಸ್ ನಲ್ಲಿ ಅದು 15 ಜನ ಅಂತ ನಾನೇ ಗಾಬರಿಯಾದೆ. ಅದು ಪುಟ್ಟ-ಪುಟ್ಟ ಮಕ್ಕಳನ್ನೆಲ್ಲಾ ತುಂಬಿಕೊಂಡು ಬಂದಿದ್ದರು. ಸಾಲದಕ್ಕೆ ನೋಡಲು ಅವರೆಲ್ಲಾ ಅನುಕೂಲಸ್ಥರಂತೆ ಕಂಡರು. ನನ್ನ ಮನ ತಡೆಯಲಿಲ್ಲ. ಹೋಗಿ ಅವರನ್ನು ವಿಚಾರಿಸಿದೆ. ಅವರು ಹೇಳಿದ ಮಾತು ಕೇಳಿ ಒಂದು ಕ್ಷಣ ದಿಗ್ಭ್ರಾಂತನಾದೆ. ಸರ್ಕಾರ ಮಾಡಿರೋ ಕ್ವಾರಂಟೈನ್ ಅಂದ್ರೆ ಇದೇನಾ ಅನ್ನಿಸಿತು. ಸರ್ಕಾರ ಇಂತಹಾ ವ್ಯವಸ್ಥೆ ಕಲ್ಪಿಸೋದಕ್ಕಿಂತ ಹೋಂ ಕ್ವಾರಂಟೈನ್ ಮಾಡೋದೇ ಒಳ್ಳೆದೆಂಬುದು ನನ್ನ ಭಾವನೆ. ಆದರೆ, ಅವರು ನನ್ನ ಜೊತೆ ಹಂಚಿಕೊಂಡ ಕಷ್ಟ-ಕಾರ್ಪಣ್ಯ, ದೂರು-ದುಮ್ಮಾಲುಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.

ಅವರೆಲ್ಲಾ ಮೂಲತಃ ಮೂಡಿಗೆರೆಯವರು. ಅಲ್ಪ-ಸ್ವಲ್ಪ ಕಾಫಿ ತೋಟವೂ ಇರೋ ಮಧ್ಯಮ ವರ್ಗದ ಜನ. ಬದುಕು-ದುಡಿಮೆಗಾಗಿ ಮುಂಬೈ-ಪೂನಾ ಸೇರಿದಂತೆ ದೇಶದ ವಿವಿದೆಡೆ ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲಾ ಊರಿಗೆ ಬರೋದು ದಸರಾ ರಜೆಯಲ್ಲಷ್ಟೆ. ಬೇರೆ ಸಮಯ ಅಂದ್ರೆ ಮದುವೆ-ಮುಂಜಿ, ಸಾವು-ನೋವಿನ ಸಮಯದಲ್ಲಿ. ಆದರೆ, ಈ ವರ್ಷ ಮಹಾಮಾರಿ ಕೊರೋನ ಇಡೀ ಕುಟುಂಬವನ್ನೇ ಅಲ್ಲಿಂದ ಕಾಲ್ಕೀಳುವಂತೆ ಮಾಡಿತ್ತು. ಸರ್ಕಾರ ಒಂದೂವರೆ ತಿಂಗಳು ಲಾಕ್ಡೌನ್ ಮಾಡಿದೆ. ಇನ್ನು ಎಷ್ಟು ದಿನ ಆಗುತ್ತೋ ಗೊತ್ತಿಲ್ಲ. ಇಲ್ಲಿ ಕೆಲಸವೂ ಇಲ್ಲ. ಇದ್ದು ಏನ್ ಮಾಡೋದು ಊರಿಗಾದ್ರು ಹೋಗೋಣ ಅಂತ ಸಂಸಾರ ಸಮೇತರಾಗಿ ಬಂದಿದ್ದರು. ಕೊರೊನಾದ ಆತಂಕದಲ್ಲಿ ಎಷ್ಟೋ ಸೇಫಾಗಿ ಸುಮಾರು 25 ಸಾವಿರ ಖರ್ಚು ಮಾಡಿಕೊಂಡು ಬಂದರು. ಆದರೆ, ಅಲ್ಲಿಂದ ಬಂದವರಿಗೆ ಇಲ್ಲಿ ಕ್ವಾರಂಟೈನ್ ಹೆಸರಲ್ಲಿ ಕಂಡದ್ದು ಅಕ್ಷರಶಃ ನರಕ. ನಾವು ಸೋಂಕಿತರಲ್ಲ. ಶಂಕಿತರಷ್ಟೆ. ಶಂಕಿತರೂ ಅಲ್ಲ. ಮುಂಜಾಗೃತಾ ಕ್ರಮವಾಗಿ ನಮ್ಮಿಂದ ನಮ್ಮವರಿಗೆ ಹಾಗೂ ಬೇರೆಯವರಿಗೂ ತೊಂದರೆಯಾಗಬಾರದೆಂದು ಸರ್ಕಾರದ ಕ್ವಾರಂಟೈನ್ ಒಳಗಾಗಿದ್ದೇವೆ. ಆದರೆ, ಇಲ್ಲಿನ ನಮ್ಮನ್ನ ನೋಡೋ ರೀತಿ ಚಿತ್ರವಿಚಿತ್ರ ಎಂದು ಭಾವನಾತ್ಮಕವಾಗಿ ಮಾತು ಆರಂಭಿಸಿದರು. ಕಣ್ಣೀರು ಬರಲಿಲ್ಲ. ಆದರೆ, ಅವರ ಮಾತಲ್ಲಿ ಸ್ಪಷ್ಟತೆ ಇರಲಿಲ್ಲ. ಕಣ್ಣೀರು ಮಾತಿನಲ್ಲಿ ಹೊರಜಾರುತ್ತಿತ್ತು.

ಸರ್… ನಾವು ಅಲ್ಲಿಂದ 25 ಸಾವಿರ ಕೊಟ್ಟು ಬಂದೆವು. ಆದರೆ, ಇಲ್ಲಿ ನಮ್ಮನ್ನೆಲ್ಲಾ ಒಂದೇ ಆಂಬುಲೆನ್ಸ್ನಲ್ಲಿ ತುಂಬಿಕೊಂಡು ಬಂದರು. ಕ್ವಾರಂಟೈನ್ ಕೇಂದ್ರದಲ್ಲಿ ಯಾವ ಸೌಲಭ್ಯವೂ ಇಲ್ಲ. ಅದು ಹೇಳೋಕಷ್ಟೆ ಕ್ವಾರಂಟೈನ್ ಕೇಂದ್ರ. ಕುಡಿಯೋಕೆ ನೀರಿಲ್ಲ. ನೀರು ಕೇಳಿದ್ರೆ ಎಲ್ಲರೂ ಕುಡಿಯೋದು ಅದೇ ನೀರು ಕುಡಿಯಿರಿ ಅಂತಾರೆ. ಆ ನೀರನ್ನ ಕುಡಿಯೋಕೆ ಆಗಲ್ಲ. ಅನಿವಾರ್ಯ ಅದೇ ನೀರನ್ನ ಕುಡಿಯಬೇಕು ಅಂದರು. ದಿನ ಬೆಳಗೆದ್ದ ಬಳಿಕ ನಮಗೆ ಕಾಫಿ-ಟೀ ಕುಡಿಯೋ ಅಭ್ಯಾಸ. ಕೇಳಿದರೆ ಸರ್ಕಾರದಿಂದ ಸೌಲಭ್ಯವಿಲ್ಲ ಅಂತಾರೆ. ನಾವೇ ಹಣ ಕೊಡ್ತೀವಿ ಅಂದ್ರು ಅದು ಸಿಗಲ್ಲ. ಟೀ ಕುಡಿಯದೆ ಮೂರು ದಿನವಾಯ್ತು. ನಮ್ಮ ಬುದ್ಧಿ ನಮ್ಮ ಕೈನಲ್ಲೇ ಇಲ್ಲ ಎಂಬಂತಾಗಿದೆ. ಮಾನಸಿಕ ಚಂಚಲತೆ ಶುರುವಾಗಿದೆ. ನಾವೇ ಹಣ ಕೊಡ್ತೀವಿ ಅಂದ್ರು ಟೀ ಕೊಡಲ್ಲ. ನಮ್ಮನ್ನ ನಿರ್ಗತಿಕರಂತೆ ನೋಡ್ತಾರೆ. ಕೊಟ್ಟು ಬದುಕಿ ಬಾಳಿದ ಕುಟುಂಬ ಈಗ ಅವರ ಬಳಿ ಬೇಡೋದಕ್ಕೆ ಸ್ವಾಭಿಮಾನ ಅಡ್ಡ ಬರುತ್ತೆಂದು ಭಾವುಕರಾದರು. ಊಟ ಕೊಡೋದು ಪ್ಲಾಸ್ಟಿಕ್ ಕವರ್ನಲ್ಲಿ. ಅದು ಕೈಗೂ ಕೊಡಲ್ಲ. ಬಾಗಿಲ ಬಳಿ ಬಂದು ಇಟ್ಟು ಹೋಗ್ತಾರೆ. ನೋವಾಗುತ್ತೆ ಸರ್ ಎಂದು ಪಕ್ಕದಲ್ಲಿದ್ದ ಪತ್ನಿ-ಮಕ್ಕಳ ಮುಖ ನೋಡಿದ್ರು. ಮನಸ್ಸು ತಡೆಯಲಿಲ್ಲ. ಹೋಗೋಣ ಅನ್ನಿಸ್ತು. ಹೋಗೋಕು ಮನಸ್ಸಾಗಲಿಲ್ಲ. ಮಾತು ಮುಂದುವರೆಸಿದೆ.

ಪ್ಲಾಸ್ಟಿಕ್ ನಿಷೇಧ ಅಂತಾರೆ. ಆದರೆ, ನಮಗೆ ಊಟ-ತಿಂಡಿ ಕೊಡೋದು ಪ್ಲಾಸ್ಟಿಕ್ ಕವರ್ನಲ್ಲಿ ಎಂದು ನಿಸ್ಸಹಾಯಕರಂತೆ ಮಾತನಾಡಿದರು. ಅವರ ಮಾತುಗಳನ್ನ ಕೇಳಿ ನನಗನ್ನಿಸಿದ್ದು, ಎಷ್ಟು ಹಣ ಇದ್ದರೇನು, ಎಷ್ಟು ಶ್ರೀಮಂತಿಕೆ ಇದ್ದರೇನು. ತಿನ್ನೋಕೆ ಅನ್ನ ಸಿಗದಿದ್ರೆ ಎಲ್ಲವೂ ಶೂನ್ಯ ಅನ್ನಿಸಿತು. ಉಪೇಂದ್ರ ಅಭಿನಯದ ರಕ್ತಕಣ್ಣೀರು ಚಿತ್ರದ ಸೆಕೆಂಡ್ ಹಾಫ್ ನೆನಪಾಯ್ತು. ಅದು ಸಿನಿಮಾವಾದ್ರು ಎಂತಹಾ ಸಂದೇಶ ಅನ್ನಿಸ್ತು. ಇವ್ರ ಪ್ರಸ್ತುತ ಬದುಕಿಗೆ ಎಷ್ಟು ಹೊಂದಾಣಿಕೆ ಅನ್ನಿಸ್ತು. ಕ್ವಾರಂಟೈನ್ ಕೇಂದ್ರದ ಬಚ್ಚಲಿನ ಬಾಗಿಲಿಗೆ ಚಿಲಕವೇ ಇಲ್ಲ ಸರ್ ಅಂದ್ರು. ನಾನು ಸ್ನಾನ ಮಾಡುವಾಗ ನನ್ನ ಹೆಂಡ್ತಿ ಹೊರಕಾಯ್ತಾಳೆ. ಆಕೆ ಸ್ನಾನ ಮಾಡುವಾಗ ನಾನು ಹೊರಕಾಯ್ತೀನಿ ಅಂದ್ರು. ಅಲ್ಲಿಂದ ಹೆಣ್ಣು ಮಗಳಿಗೆ ಬೇಜಾರಾಯ್ತೋ-ನಾಚಿಕೆಯಾಯ್ತೋ ಗೊತ್ತಿಲ್ಲ. ಆಕೆ ಅಲ್ಲಿಂದ ಹೊರಟು ಹೋದಳು. ಕ್ವಾರಂಟೈನ್ ಹೆಸರಲ್ಲಿ ಸರ್ಕಾರ ಜನಸಾಮಾನ್ಯರನ್ನ ನಡೆಸಿಕೊಳ್ತಿರೋ ರೀತಿ ನಿಜಕ್ಕೂ ತಪ್ಪು ಸರ್. ಸಹಿಸಲಸಾಧ್ಯ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಮಹಾಮಾರಿ ಕೊರೊನ ಜಗತ್ತನ್ನೇ ಕಿತ್ತು ತಿಂತಿದೆ. ಆ ಅರಿವೂ ನಮಗೂ ಇದೆ. ಸರ್ಕಾರಕ್ಕೆ ನಾವು ಸಪೋರ್ಟ್ ಮಾಡ್ತೀವಿ. ಸರ್ಕಾರದ ಜೊತೆ ಕೈ ಜೋಡಿಸ್ತೀವಿ. ಆದ್ರೆ, ಸರ್ಕಾರ ನಮ್ಮನ್ನ ಒಳ್ಳೆ ರೀತಿ ನೋಡಿಕೊಳ್ತಿಲ್ಲ ಎಂದರು. ನಾವೇ ಹಣ ಕೊಡ್ತೀವಿ ಅಂದ್ರು ಯಾವ ಸೌಲಭ್ಯವೂ ಇಲ್ಲ. ಮಕ್ಕಳ ಮುಖ ನೋಡಲು ಆಗ್ತಿಲ್ಲ ಎಂದು ಶಕ್ತಿಹೀನರಂತೆ ಮಾತನಾಡಿದರು. ಸರ್ಕಾರ ಕಡೇ ಪಕ್ಷ ಶಕ್ತಿವಂತರಿಗಾದ್ರು ಹೋಂಸ್ಟೇ, ಲಾಡ್ಜ್, ರೆಸಾರ್ಟ್ಗಳಲ್ಲಿ ಕ್ವಾರಂಟೈನ್ ಮಾಡಿದರೆ ಒಳ್ಳೆದಾಗುತ್ತೆ. ಅವರ ಖರ್ಚನ್ನ ಅವರೇ ನೋಡಿಕೊಳ್ತಾರೆ. ಇಲ್ಲ ಕೈಗೆ ಸೀಲ್ ಹಾಕಿ, ಮನೆಗೆ ಚೀಟಿ ಅಂಟಿಸಿ ಹೋಂ ಕ್ವಾರಂಟೈನ್ಗಾದ್ರು ಅವಕಾಶ ಕೊಟ್ರೆ ಒಂದಷ್ಟು ನೆಮ್ಮದಿಯಾದರು ಸಿಗುತ್ತೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಸರ್ಕಾರ ಒಳ್ಳೆ ಸೌಲಭ್ಯ ನೀಡಲಿ ಅಥವ ನಮಗೆ ಬೇಕಾಗಿದ್ದನ್ನು ನಮ್ಮ ದುಡ್ಡಲ್ಲೇ ವ್ಯವಸ್ಥೆ ಮಾಡಲಿ ಎಂದು ಬೇಡಿಕೆ ಇಟ್ಟರು. ನಾವು ಅನ್ನ ಇಲ್ದೆ ಬಂದಿಲ್ಲ ಸರ್. ನಾವು ಭಿಕ್ಷುಕರಲ್ಲ. ನಿರ್ಗತಿಕರೂ ಅಲ್ಲ. ನಮಗೆ ಎಲ್ಲಾ ರೀತಿಯ ಸೌಲಭ್ಯವನ್ನ ಒದಗಿಸಿಕೊಳ್ಳುವ ಶಕ್ತಿ ಇದೆ. ಆದರೆ, ಸರ್ಕಾರ ಕ್ವಾರಂಟೈನ್ ಹೆಸರಲ್ಲಿ ನಮ್ಮನ್ನು ನಿರ್ಗತಿಕರಿಗಿಂತ ಕೀಳಾಗಿ ನಡೆಸಿಕೊಳ್ತಿದೆ ಎಂದು ಆಕ್ರೋಶ ಹೊರಹಾಕದರು.

ನಿಜ ಸರ್, ನಾವು ಒಪ್ಪಿಕೊಳ್ತೀವಿ. ಸರ್ಕಾರಕ್ಕೆ ಈ ಪರಿಸ್ಥಿತಿಯನ್ನ ನಿಯಂತ್ರಿಸೋದು-ನಿಭಾಯಿಸೋದು ಕಷ್ಟ. ಹಾಗಂತ, ಸೌಲಭ್ಯವಂಚಿತರಾಗಿ ನಿರ್ಗತಿಕರಂತೆ ನಡೆಸಿಕೊಳ್ಳೋದು ಎಷ್ಟು ಸರಿ. ಅದು ಸೋಂಕಿತರು, ಶಂಕಿತರು ಅಲ್ಲದೆ, ಕೇವಲ ದೂರದ ರಾಜ್ಯಗಳಿಂದ ಬಂದವರೆಂಬ ಒಂದೇ ಒಂದು ಕಾರಣಕ್ಕೆ ಅಂದರು. ನನಗೆ ಅವರ ಮಾತು ಸತ್ಯ ಅನ್ನಿಸ್ತು. ನಿಜ ಅನ್ನಿಸ್ತು. ಸೋಂಕಿತರಿಗೂ ಹಾಗೆ ಮಾಡಬಾರದು. ಒಂದು ವೇಳೆ ಮಾಡಿದರೆ, ನಮಗೂ ಬರುತ್ತೆಂಬ ಭಯದಿಂದ ಹಾಗೆ ಮಾಡಿದರು ಎನ್ನಬಹುದು. ಆದರೆ, ಏನೂ ಇಲ್ಲದವರನ್ನ ದೂರದಿಂದ ಬಂದವರೆಂಬ ಒಂದೇ ಕಾರಣಕ್ಕೆ ಹೀಗೆ ಮಾಡೋದು ಎಷ್ಟು ಸರಿ ಅಲ್ವಾ. ಇದು ಕೇವಲ ಮೂಡಿಗೆರೆ ಸಮಸ್ಯೆಯಲ್ಲ. ಇಡೀ ರಾಜ್ಯದ್ದು. ದೇಶದ್ದು. ಸರ್ಕಾರ ಇತ್ತ ಗಮನ ಹರಿಸಬೇಕು. ಒಂದು ಸೌಲಭ್ಯ ನೀಡಬೇಕು. ಇಲ್ಲ ಖಾಸಗಿ ಹೋಟೆಲ್-ರೆಸಾರ್ಟ್ಗಳಲ್ಲಿ ಕ್ವಾರಂಟೈನ್ ಮಾಡಬೇಕು. ಇಲ್ಲ, ಕೈಗೆ ಸೀಲ್ ಹಾಕಿ ಮನೆಯಿಂದ ಹೊರಬರಬೇಡಿ ಎಂದು ಹೋಂ ಕ್ವಾರಂಟೈನ್‍ಗಾದ್ರು ಅವಕಾಶ ಕಲ್ಪಿಸಬೇಕು ಅಂತ ವೈಯಕ್ತಿಕವಾಗಿ ನನಗೂ ಅನ್ನಿಸ್ತು.

ಆರಂಭದಲ್ಲಿ ಕೊರೊನ ಕೇಸಿರಲಿಲ್ಲ. ಆಗ ಲಾಕ್ಡೌನ್ ಮಾಡುದ್ರು. ಈಗ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈಗ ಲಾಕ್ಡೌನ್ ಫ್ರೀ ಮಾಡಿದ್ದಾರೆ ಮುಂದೆ ಏನಾಗುತ್ತೋ ಏನೋ ದೇವರೇ ಬಲ್ಲ ಎಂದು ಭವಿಷ್ಯದ ಬಗ್ಗೆಯೂ ಆಲೋಚಿಸಿದರು. ನನ್ನೊಂದಿಗೆ ಮಾತನಾಡಿದ ಆತ ಎಜುಕೇಟೆಡ್. ಚೆನ್ನಾಗಿ ಓದಿದ್ದಾನೆ. ತಿಳಿದುಕೊಂಡಿದ್ದಾನೆ. ಒಳ್ಳೆಯ ಕೆಲಸದಲ್ಲಿದ್ದಾನೆ. ಕೈತುಂಬ ದುಡಿಯುತ್ತಾನೆ. ಮನೆ ಕಡೆಯೂ ಚೆನ್ನಾಗಿದ್ದಾರೆ. ಆದರೆ, ಆತ ನನ್ನೊಂದಿಗೆ ಮಾತನಾಡುತ್ತ ಹೇಳಿದ ವಿಷಯಗಳು ನನಗೇ ಬೇಜಾರು ತರಿಸಿತು. ಪಾಪ ಅನ್ನಿಸಿತು. ಅನ್ನಕ್ಕಾಗಿ ಅಲ್ಲಿಂದ ಬಂದು ಇಲ್ಲಿ ಈ ರೀತಿ ನರಕಯಾತನೆ ಅನುಭವಿಸ್ತಿದ್ದಾರೆಂದು ಬೇಜಾರಾಯ್ತು. ಇದು ನನ್ನ ಕಣ್ಣೆದುರಿಗೆ ನಡೆದ ಘಟನೆ. ಆದರೆ, ಈ ದೇಶದಲ್ಲಿ ಇಂತಹಾ ಕೇಸ್ ಇನ್ನು ಎಷ್ಟಿರಬಹುದು. ಜನ ಹೇಗೆಲ್ಲಾ ಕಷ್ಟ ಪಡ್ತಿರಬಹುದು ಎಂದು ನನ್ನನ್ನ ನಾನೇ ಪ್ರಶ್ನೆ ಮಾಡಿಕೊಂಡೆ. ಎಲ್ಲವನ್ನು ನಿನ್ನೊಬ್ಬನಿಂದ ಸರಿಮಾಡಲು ಸಾಧ್ಯವಿಲ್ಲ ಎಂದು ಆತ್ಮಸಾಕ್ಷಿ ಎದೆಗೆ ಬಡಿದು ಹೇಳಿತು. ನಾನು ಸುಮ್ಮನಾದೆ.

ನಿಜ, ಎಲ್ಲವನ್ನೂ ನಾನೊಬ್ಬನೇ ಸರಿ ಮಾಡಲು ಆಗಲ್ಲ. ಅದು ನನಗೂ ಗೊತ್ತು. ಸರಿ ಮಾಡ್ತೀನೆಂಬ ಹುಂಬತನ, ಅಹಂ ಕೂಡ ನನ್ನಲ್ಲಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಆದರೆ, ತಪ್ಪನ್ನ ಕೇಳುವ ಶಕ್ತಿಯಂತೂ ಇದೆ. ಅದಕ್ಕೆ ಇದೇ ಸರಿಯಾದ ಮಾರ್ಗ ಅನ್ನಿಸ್ತು. ಅದಕ್ಕೆ ಇಲ್ಲಿ ಬರೆದೆ. ಸರ್ಕಾರ ಕ್ವಾರಂಟೈನ್ಗಳತ್ತ ಗಮನ ಹರಿಸಬೇಕು. ಅಲ್ಲಿನ ಸೌಲಭ್ಯಗಳ ಬಗ್ಗೆ ಪರಾಮರ್ಶಿಸಬೇಕು. ಆಗ ಕ್ವಾರಂಟೈನ್ ಅಂದ್ರೆ ಜನ ಹೀಗೆ ಸರ್ಕಾರದ ವಿರುದ್ಧ ಅಸಮಾಧಾನವನ್ನೂ ಹೊರಹಾಕಲ್ಲ. ನಾವೇ ಹಣ ಕೊಡ್ತೀವಿ ಮಾಡಿ ಅಂತಾಲೂ ಹೇಳಲ್ಲ. ಎಲ್ಲಾ ಸಂದರ್ಭದಲ್ಲೂ ಸರ್ಕಾರದ ಬೆನ್ನಿಗೆ ನಿಲ್ತಾರೆ. ನಮ್ಮ ಫಸ್ಟ್ ಸುದ್ದಿ ಬಳಗದಿಂದಲೂ ನಾವು ಅದನ್ನೇ ಆಶಿಸ್ತಿವಿ. ಆತ ಹೇಳಿದ ಹಾಗೇ ಕ್ವಾರಂಟೈನ್ ಇದ್ದರೆ ಸರ್ಕಾರ ಕೂಡಲೇ ಅವರನ್ನ ಸರಿ ಮಾಡಲಿ ಅನ್ನೋದು ನಮ್ಮ ಬಯಕೆ ಕೂಡ.