ಡಾ. ಎಂ.ಎಸ್. ಮಣಿ
ದಣಿದ ದೇಹ ಕೆಲವು ಘಂಟೆಗಳ ಕಾಲ ದೈಹಿಕ ವಿಶ್ರಾಂತಿ ಪಡೆಯುವುದಕ್ಕೆ ನಿದ್ರೆ ಎನ್ನಲಾಗುತ್ತದೆ. ದೈನಂದಿನ ಬದುಕಿನಲ್ಲಿ ಕೆಲವೆಡೆ ತೆಗಳಿಕೆ, ಹೊಗಳಿಕೆಗಳನ್ನು ಬೇರೆ, ಬೇರೆ ಸಂದರ್ಭಗಳಲ್ಲಿ ಎದುರಾಗಿರುತ್ತದೆ. ಆಗ ನಮ್ಮ ಮೆದುಳಿನ ಕೋಶಗಳು ಸೂಕ್ತವಾದ ಪ್ರತಿಕ್ರಿಯೆಗಳನ್ನು ನೀಡುತ್ತಿರುತ್ತದೆ. ಹೀಗೆ ಪ್ರತಿಕ್ರಿಯೆ ನೀಡುವ ಮೆದುಳಿನ ಕೋಶಗಳಿಗೆ ಸ್ವಲ್ಪ ಮಟ್ಟಿಗಿನ ವಿಶ್ರಾಂತಿಯ ಅಗತ್ಯವೂ ಇರುತ್ತದೆ. ಇಂತಹ ವಿಶ್ರಾಂತಿಯೇ ನಿದ್ರೆಯಾಗಿದೆ. ಈ ಸಮಜಾಯಿಶಿಯನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುವರು. ಹಾಗಾದರೆ ನಿದ್ರೆಗೆ ಬೇರೆ ಅರ್ಥ ಇದೆಯೇ ಎಂಬ ಪ್ರಶ್ನೆಯೂ ಉದ್ಭವವಾಗದೆ ಇರದು. ಡಾ|| ನಾಗೇಶ್ ಬಸವರಾಜ್ ಅವರ ಪ್ರಕಾರ ನಿದ್ರೆ ಒಂದು ಸ್ಥಿತಿ. ಅಲ್ಲಿ ನಾವಿರುವುದಿಲ್ಲ. ಆದರೆ, ನಾವು ಕನಸು ಕಾಣುವಾಗ ಅಲ್ಲಿರುತ್ತೇವೆ.

ಮೆದುಳು ಮತ್ತು ಮನಸ್ಸು ಸದಾಕಾಲ ಕಾರ್ಯನಿರತವಾಗಿರುತ್ತದೆ. ಪ್ರತಿಕ್ರಿಯಿಸುತ್ತಿರುತ್ತದೆ, ಸವಾಲೆಸೆಯುತ್ತಿರುತ್ತದೆ, ರಕ್ಷಿಸುತ್ತಿರುತ್ತದೆ. ಹೋರಾಟ ಮಾಡುತ್ತಿರುತ್ತದೆ. ಆಕ್ರಮಣಕಾರಿಯಾಗಿರುತ್ತದೆ. ಇಂತಹ ಘಳಿಗೆಯಲ್ಲಿ ದೇಹ ದಣಿದಿರುತ್ತದೆ. ಆಗ ಮೆದುಳಿನ ಕೋಶಗಳು ನಾನೀಗ ಮಲಗಬೇಕೆಂದು ಹೇಳುತ್ತದೆ. ಆದರೂ, ಮೆದುಳಿನ ಕೋಶಗಳು ಕಾರ್ಯನಿರತವಾಗಿಯೇ ಇರುತ್ತದೆ. ಇದಕ್ಕೆ ನಿದ್ರೆಯೊಂದೇ ಪರಿಹಾರ ಎಂದು ಎಲ್ಲರೂ ಭಾವಿಸುತ್ತಾರೆ. ಹಾಗೆಯೇ ಸ್ವಲ್ಪ ಕಾಲ ನಿದ್ರಿಸಬೇಕೆಂದು ಬಯಸುತ್ತಾರೆ. ಆದರೆ, ದೇಹ “ನನಗೆ ದಣಿವಾಗಿದೆ. ಸಾಕಾಗಿದೆ. ಹಾಸಿಗೆಗೆ ಹೋಗಿ ಮೈ ಚೆಲ್ಲಬೇಕೆಂದು ಹೇಳುತ್ತದೆ. ಆಗಲೂ ಮೆದುಳು ಕೋಶಗಳು ಕಾರ್ಯನಿರ್ವಹಿಸುತ್ತಿರುತ್ತದೆ. ಅಲ್ಪ ಪ್ರಮಾಣದಲ್ಲಿ ಕನಸುಗಳನ್ನು ಕಾಣುತ್ತದೆ. ಇಲ್ಲಿ ಮನಸ್ಸು, ಮೆದುಳು, ನರವ್ಯವಸ್ಥೆ ಒಂದುಗೂಡಿ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಆದರೆ, ಮೆದುಳು ಮತ್ತು ಮನಸ್ಸು ಮಾತ್ರ ಸ್ತಬ್ಧವಾಗಿರುತ್ತದೆ. ಇವು ನಿದ್ರಿಸುತ್ತಿರುತ್ತವೆ. ಮನಸ್ಸು, ಮೆದುಳು, ನರವ್ಯವಸ್ಥೆ ಕಣ್ಣಿಗೆ ಕಾಣುವಂತೆ ಚಲನಶೀಲವಾಗಿರುತ್ತದೆ. ನನ್ನನ್ನು ನನ್ನ ಪಾಡಿಗೆ ಬಿಡಿ ಎಂದು ದೇಹ ಬಯಸಿದಾಗಲೂ ಇವು ಕಾರ್ಯನಿರ್ವಹಿಸುವುದಿಲ್ಲ. ಮೆದುಳು ಸಕ್ರಿಯವಾಗಿರುತ್ತದೆ.
ಹಾಸಿಗೆಗೆ ಹೋಗುವ ಮುನ್ನ ಸ್ವಲ್ಪ ಎಚ್ಚರವಾಗಿರಬೇಕು. ಘಂಟೆಗಳು ಉರುಳಿದಂತೆ, ದಿನಪೂರ್ತಿಯಾಗುತ್ತಿದ್ದಂತೆ, ನಾನಿದನ್ನು ಮಾಡಿದೆ, ಅದನ್ನು ಮಾಡಿದೆ, ಪತ್ರಗಳನ್ನು ಬರೆದೆ ಎಂದೆಲ್ಲ ನೆನಪಿನ ಪಟದಲ್ಲಿ ಇಟ್ಟುಕೊಂಡಿರುತ್ತೀರಿ. ಇಲ್ಲಿ ನಿಮಗೊಂದು ಕ್ರಮ ಅಗತ್ಯವಾಗಿ ಬೇಕಿದ್ದರೆ, ಮೆದುಳಿಗೂ ಒಂದು ಕ್ರಮ ಬೇಕಾಗಿರುತ್ತದೆ. ನೀವು ನಿದ್ರೆಗೆ ಜಾರಿದಾಗ ಕ್ರಮ ಅದೇ ಅಳವಡಿಸಿಕೊಳ್ಳುತ್ತದೆ. ಅದೇ ಕನಸಿನ ರೂಪ. ಹೀಗಾಗಿ ಮೆದುಳು ಕ್ರಮಬದ್ಧತೆ ನೀಡಿ, ಸತತವಾಗಿ ಚಲನಶೀಲವಾಗಬೇಡಿ ಎಂದು ಬಯಸುತ್ತದೆ. ಬೆಳಗಿನ ಹೊತ್ತು ಎದ್ದಾಗ ಮೆದುಳು ಕ್ರಮಬದ್ಧವಾಗಿರುವುದರ ಗ್ರಹಿಕೆ ನಮಗಾಗುತ್ತದೆ. ನಿದ್ರೆಯ ಮೂಲಕ ಇಂತಹ ಕ್ರಮಬದ್ಧತೆಯನ್ನು ಸಾಧಿಸಲಾಗುತ್ತದೆ. ಒಂದು ವೇಳೆ ನೀವಿದನ್ನು ಮಾಡದಿದ್ದಲ್ಲಿ, ನಿಮ್ಮ ಮೆದುಳು ಮಾಡುತ್ತದೆ. ಇದನ್ನು ಮರುದಿನ ಮುಂಜಾನೆ ಎದ್ದಾಗ ಕಾಣಬಹುದು.
ಮಾನಸಿಕ ಆರೋಗ್ಯದ ವಿಚಾರಕ್ಕೆ ಬಂದಾಗ ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ಅನಾರೋಗ್ಯದ ನಡುವೆ, ಭಿನ್ನತೆಯನ್ನು ಕಂಡುಕೊಳ್ಳಬೇಕು. ಅತಿಯಾದ ನಿದ್ರಾಹೀನತೆಯಿಂದಲೂ ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ಅನಾರೋಗ್ಯ ಉಂಟಾಗಬಹುದು.
ಇದನ್ನು ಇವತ್ತಿನ ಸಂದರ್ಭದಲ್ಲಿ ಕೊರೋನಾ ಸೋಂಕು ನಿದ್ರೆಯನ್ನು ಹಾಳುಗೆಡವಿ ಖಿನ್ನತೆ, ಅಸ್ವಸ್ಥತೆ ಬಿತ್ತಿ ಕಂಟಕಪ್ರಾಯವಾಗಿರುವುದನ್ನು ಕಾಣಬಹುದು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದಲ್ಲಿ ಮನೆ ಮುಂದೆ ರಂಗೋಲಿ ಹಾಕಿ ರಾತ್ರಿಯಿಡಿ ಅರಿಶಿಣ, ಶುಂಠಿ ಬೆರೆಸಿದ ಚಹಾ ಕುಡಿದು ನಿದ್ರೆಗೆಟ್ಟಿದ್ದಾರೆ. ಅರಿಶಿಣ ಹಾಕಿ ಚಹಾ ಕುಡಿದರೆ ನೆಗಡಿ, ಕೆಮ್ಮು ಬರುವುದಿಲ್ಲ ಮತ್ತು ಕೊರೋನಾ ರೋಗ ಕೂಡ ಬರುವುದಿಲ್ಲ ಎಂಬ ಸಮೂಹಸನ್ನಿಗಿಲ್ಲಿ ಒಳಗಾಗಿದ್ದಾರೆ. ಉಡುಪಿಯ ಕೆ.ಎಸ್.ಆರ್.ಟಿ.ಸಿ. ಚಾಲಕರಾಗಿದ್ದ ಗೋಪಾಲ ಮಹಿವಾಳ, ತನ್ನ ಗೆಳೆಯ ಕೊರೋನಾ ರೋಗಿಯಾಗಿದ್ದು, ತನಗೂ ರೋಗ ಅಂಟಿರಬಹುದೆಂದು ಆತಂಕಕ್ಕೆ ಈಡಾಗಿ ಮನೆಯ ಹಿಂಬದಿಯಲ್ಲಿದ್ದ ಗೇರು ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕ್ರೈಸ್ತ ಪಾದ್ರಿ ರುಫಸ್ ಫಾಲಾ ಎಂಬುವರು ಸಾಮಾನ್ಯ ಆತಂಕದ ಕಾಯಿಲೆಗೆ ಗುರಿಯಾಗಿ ಕೊರೋನಾ ಗುಣಪಡಿಸುವುದಾಗಿ ಹಲವರಿಗೆ ಡೆಟಾಲ್ ಕುಡಿಸಿ, ತಾನೂ ಕುಡಿದಿದ್ದಾರೆ. ಡೆಟಾಲ್ ಕುಡಿದವರ ಪೈಕಿ 59 ಮಂದಿ ಸಾವನ್ನಪ್ಪಿದ್ದು, ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮಧ್ಯಪ್ರದೇಶದ ಗ್ವಾಲಿಯರ್ ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣವೊಂದರ ದೋಷಿ ವಿಷ್ಣು ಸಿಂಗ್ ಎಂಬಾತನಿಗೆ ಕನಸಿನಲ್ಲಿ ಶಿವ ಪ್ರತ್ಯಕ್ಷನಾಗಿ ಜನನಾಂಗ ಅರ್ಪಿಸುವಂತೆ ಹೇಳಿದಂತೆ ಭಾಸವಾಗಿತ್ತಂತೆ. ಮನೋವ್ಯಾಧಿಗೊಳಗಾದ ವಿಷ್ಣು ಸಿಂಗ್ ಜೈಲಿನಲ್ಲಿ ತನಗೆ ಊಟಕ್ಕೆಂದು ನೀಡಿದ್ದ ಚಮಚವನ್ನು ಹರಿತ ಮಾಡಿಕೊಂಡು ಅದರಿಂದ ತನ್ನ ಜನನಾಂಗ ಕತ್ತರಿಸಿ ಶಿವಲಿಂಗಕ್ಕೆ ಅರ್ಪಿಸಿದ್ದಾನೆ. ಕಡೂರು ತಾಲೂಕಿನ ಸೇವಾನಗರದ ರಮೇಶ್ ನಾಯ್ಕ ಅವರ ಪುತ್ರಿ ಸಂಗೀತಾ ಎಂಬುವರು ಉತ್ತರ ಪ್ರದೇಶದ ಅಮಿತ್ ಎಂಬುವರನ್ನು ವಿವಾಹವಾಗಿದ್ದರು. ಈಕೆಗೊಂದು ಹೆಣ್ಣುಮಗು ಕೂಡ ಇತ್ತು. ಇಪ್ಪತ್ಮೂರು ದಿನಗಳ ಹಸುಗೂಸನ್ನು ಖಿನ್ನತೆಗೊಳಗಾಗಿ ನೀರು ಕಾಯಿಸುವ ಒಲೆಯೊಳಗೆ ಹಾಕಿ ಕೊಂದಿದ್ದಾಳೆ. ನಂತರ ಮಗುವನ್ನು ನಾಯಿ ಕಚ್ಚಿಕೊಂಡು ಹೋಗಿದೆ ಎಂದು ಕೂಗುಹಾಕಿ, ಕಣ್ಣೀರಿಡುವ ನಾಟಕ ಮಾಡಿದ್ದಾಳೆ. ಬಚ್ಚಲುಮನೆಯಲ್ಲಿ ದುರ್ವಾಸನೆ ಬರುತ್ತಿದ್ದರಿಂದ, ನೀರು ಕಾಯಿಸುವ ಒಲೆಯನ್ನು ಪರಿಶೀಲಿಸಿದಾಗ ಅಲ್ಲಿ ಮಗು ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ ಗ್ರಾಮದಲ್ಲಿ ಸಾರಿಗೆ ಉಪ್ಪು ಹೆಚ್ಚಾಗಿದೆ ಎಂಬ ಕಾರಣಕ್ಕೆ ಬಾಲಚಂದ್ರ ತನ್ನ ಮಡದಿ ಮಧುರಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪಂಜಾಬ್ ಮೂಲದ 23 ವರ್ಷದ ಟೀವಿ ನಟ ಮನ್ಮೀತ್ ಗ್ರೇವಾಲ್ ಮತ್ತು ನಾಗವಾರ ಸಮೀಪದ ನಿವಾಸಿ ವಕೀಲ ಶಿವರಾಜ್ ಆತಂಕಕ್ಕೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ದೇವಾಂಗಪೇಟೆ ನಿವಾಸಿ ಶರಣಪ್ಪ ಹಡಪದ ಮದುವೆ ಮುಂದೂಡಿದಕ್ಕೆ ಸಂತೋಷನಗರ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದ ವ್ಯಕ್ತಿಯೊಬ್ಬ ಮೂಲವ್ಯಾಧಿಯಿಂದ ನರಳುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವಾಗಲೇ ಶೌಚಾಲಯಕ್ಕೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಲಬುರಗಿಯ ಆಳಂದ ತಾಲೂಕಿನ ಆಶಾ ಕಾರ್ಯಕರ್ತೆ ರೇಣುಕಾ ನಾಗಪ್ಪ ಕುಡಕಿ ಅವರು ಕ್ವಾರಂಟೈನ್‍ನಲ್ಲಿದ್ದವರಿಗೆ ತಿನ್ನಲು ಚಿಕನ್, ಮೀನು, ಮಕ್ಕಳಿಗೆ ಚಿಪ್ಸ್, ಚಾಕಲೇಟ್ ಕೊಟ್ಟಿಲ್ಲವೆಂದು ಸೋಮನಾಥ ಕಾಂಬಳೆ ಕುಟುಂಬ ವರ್ಗ ಹಲ್ಲೆ ನಡೆಸಿ ಕೈ ಮೂಳೆ ಮುರಿದು ಹಾಕಿದ್ದಾರೆ.
ಕೊರೋನಾ ಸೃಷ್ಟಿಸಿರುವ ಆತಂಕವು ಜನರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರಿಂದ ಧಾರ್ಮಿಕ, ಆಧ್ಯಾತ್ಮಿಕದತ್ತ ಜನರು ಹೆಚ್ಚು ಗಮನ ನೀಡುತ್ತಿದ್ದಾರೆಂದು ಇನ್‍ಸ್ಟಾಮೊಜೊ ನಡೆಸಿರುವ ಸಮೀಕ್ಷೆ ತಿಳಿಸಿದೆ. ಇನ್‍ಸ್ಟಾಮೊಜೊ ಕಂಪನಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಡಿಜಿಟಲ್ ರೂಪದ ಪರಿಹಾರ ಒದಗಿಸುವ ಕಂಪನಿಯಾಗಿದೆ.
ಹೀಗಾಗಿ ಅನಾರೋಗ್ಯಕ್ಕೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದು ಫಿನ್ನೀಷ್ ಡಾಟಾಸೆಟ್ ಎಂಬ ಅಂತರರಾಷ್ಟ್ರೀಯ ಸಂಶೋಧಕರ ತಂಡ ಪತ್ತೆ ಮಾಡಿದೆ. 20 ಜನ ಗುಂಪಿನ ಮಾನಸಿಕ ಪರಿಸ್ಥಿತಿಗಳನ್ನು ಐದು ವಿಭಿನ್ನ ಗುಂಪುಗಳ ಜನರಿಂದ ಸಂಗ್ರಹಿಸಿದೆ. ಈ ಸಂಬಂಧ 6,200 ಜನರಿಗೆ ಪ್ರಶ್ನಾವಳಿಗಳನ್ನು ವಿತರಿಸಿತ್ತು. ಇವರಲ್ಲಿ 3 ಸಾವಿರ ಜನರನ್ನು ಜನಸಂಖ್ಯಾ ವಹಿಯಿಂದ ತೆಗೆದುಕೊಳ್ಳಲಾಗಿದೆ. ಹಾಗೆಯೇ 1,500 ಜನ ವೈದ್ಯರು, ನರ್ಸ್‍ಗಳು, ಮನೋವೈದ್ಯರನ್ನು, 200 ಜನ ಫಿನ್ನೀಷ್‍ನ ಸಂಸದರನ್ನು ಸಂಪರ್ಕಿಸಿ, ಪ್ರಶ್ನಾವಳಿಗಳಿಗೆ ಉತ್ತರವನ್ನು ಸಂಗ್ರಹಿಸಲಾಗಿರುತ್ತದೆ. ಒಟ್ಟು 3,259 ಪ್ರತಿಕ್ರಿಯೆಗಳು ಶೇಕಡ 53ರಷ್ಟು ಸಂಶೋಧಕರಿಗೆ ಲಭಿಸಿದೆ. ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಬ್ರಿಟಿಷ ಮೆಡಿಕಲ್ ಜರ್ನಲ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಮೆದುಳು ತಜ್ಞವೈದ್ಯ ಡಾ|| ಶೈಲೇಂದ್ರಕುಮಾರ್ ವಿವರಿಸಿದರು.
ಕೆಳಗಿನ ಅಂಶಗಳ ಬಗ್ಗೆ ವ್ಯಾಖ್ಯಾನಿಸಿರುವುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅಟೆನ್ಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸ್‍ಆರ್ಡರ್, ಮದ್ಯಪಾನ, ಹಸಿವಿಲ್ಲದಿರುವಿಕೆ, ಸ್ವಲೀನತೆ, ಹಸಿವುರೋಗ, ಅಕಾಲಿಕ ಸ್ಖಲನ, ಸಲಿಂಗಕಾಮ, ಮಾದಕವ್ಯಸನ, ಖಿನ್ನತೆ, ಭಯದಿಂದ ಅಸ್ವಸ್ಥತೆ, ಜೂಜಿನ ಚಟ, ವ್ಯಕ್ತಿತ್ವದ ಅಸ್ವಸ್ಥತೆ, ಲೈಂಗಿಕ ಬಯಕೆಯ ಅನುಪಸ್ಥಿತಿ, ಮನೋವ್ಯಾಧಿ, ಸಾಮಾಜಿಕ ಆತಂಕದ ಕಾಯಿಲೆ, ದುಃಖ, ಲಿಂಗ ಭೇದಭಾವ, ಕೆಲಸದ ಬಳಲಿಕೆ, ನಿದ್ರಾಹೀನತೆ ಮತ್ತು ಸಾಮಾನ್ಯ ಆತಂಕದ ಕಾಯಿಲೆ.
ಶೇಕಡ 75ರಷ್ಟು ಜನ ಸ್ವಲೀನತೆ, ಮನೋವ್ಯಾಧಿ ರೋಗವೆಂದು ಪರಿಗಣಿಸಿದ್ದಾರೆ. ಆದರೆ ಸಲಿಂಗಕಾಮ ಮತ್ತು ದುಃಖವನ್ನು ರೋಗವೆಂದು ಪರಿಗಣಿಸಿರುವುದಿಲ್ಲ. ಎಲ್ಲಾ ಗುಂಪಿನವರು ಅಟೆನ್ಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸ್‍ಆರ್ಡರ್, ವ್ಯಕ್ತಿತ್ವ ಅಸ್ವಸ್ಥತೆ, ಸಾಮಾನ್ಯ ಆತಂಕದ ಕಾಯಿಲೆಗಳನ್ನು ರೋಗವೆಂದು ಶೇಕಡ 50ರಿಂದ 75 ಜನ ಪ್ರತಿಕ್ರಿಯಿಸಿದವರು ಒಪ್ಪಿಕೊಂಡಿರುತ್ತಾರೆ. ಇದಿಷ್ಟೇ ಸಂಖ್ಯೆಯ ಪ್ರತಿಕ್ರಿಯೆದಾರರು, ಅಕಾಲಿಕ ಸ್ಖಲನ, ಲೈಂಗಿಕ ಬಯಕೆಯ ಅನುಪಸ್ಥಿತಿ, ಲಿಂಗ ಭೇದಭಾವವನ್ನು ರೋಗವೆಂದು ಪರಿಗಣಿಸಿರುವುದಿಲ್ಲ. ಧೂಮಪಾನ, ಡ್ರಗ್ ಮತ್ತು ಜೂಜಿನ ಚಟ, ಸಾಮಾಜಿಕ ಆತಂಕದ ಕಾಯಿಲೆ, ನಿದ್ರಾಹೀನತೆ, ಕೆಲಸದ ಬಳಲಿಕೆ ರೋಗಗಳ ಬಗ್ಗೆ ವಿಭಿನ್ನವಾದ ಪ್ರತಿಕ್ರಿಯೆಗಳನ್ನು ಕೊಟ್ಟಿರುತ್ತಾರೆ.
ಹೀಗಾಗಿ, ಮೆದುಳು ಸದಾ ಕ್ರಮಬದ್ಧತೆಯನ್ನು ಅಪೇಕ್ಷಿಸುತ್ತದೆ. ಇದು ನಿದ್ರೆಗೆ ಜಾರಿದಾಗ ಪಡೆದುಕೊಳ್ಳುತ್ತದೆ. ಕ್ರಮ ಮತ್ತು ನಿಶ್ಶಬ್ದ ಎಂಬುದು ಹಗಲಿನ ವೇಳೆಯಲ್ಲಿ ಅತ್ಯಂತ ಕಠಿಣವಾದ ವಿಚಾರವಾಗಿದೆ. ನೀವು ಗಣಿತದ ಅಥವಾ ಮಾನಸಿಕ ಸಮಸ್ಯೆಯನ್ನು ದಿನಪೂರ್ತಿ ಹೊಂದಿದ್ದರೆ ಅಥವಾ ಎಡೆಬಿಡದ ಕಾರ್ಯದಲ್ಲಿ ಮುಳುಗಿದ್ದರೆ ಮೆದುಳು ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಆಗ ಮೆದುಳು ತುಂಬಾ ದಣಿದಿರುತ್ತದೆ.
ಇದಿರಲಿ, ಚಂದ್ರನ ಬೆಳದಿಂಗಳು ಕೆಲವು ಜನರ ಮೇಲೆ ಬಿದ್ದು ವಿಲಕ್ಷಣ ಪರಿಣಾಮಗಳು ಉಂಟಾಗಿರುವ ಸಂಭವಗಳು ಇವೆ. ಇರುಳಲ್ಲಿ ರಕ್ತ ಕೆಂಪುವರ್ಣದ ಚಂದ್ರ ಅನೇಕರನ್ನು ಮೋಡಿ ಮಾಡಿರುವನು. ಮತ್ತೆ ಕೆಲವರನ್ನು ಸಂಕಟಕ್ಕೂ ಗುರಿಮಾಡಿರುವನು. ಆದರೆ, ಚಂದ್ರನೊಳಗಡೆ ತೋಳ ಇದೆ. ಅದು ಮೃಗೀಯತೆಯಿಂದ ಅರಚಿ ಬೆದರಿಸುತ್ತದೆ. ಹೊರಬಂದು ಮಕ್ಕಳನ್ನು ಭಕ್ಷಿಸುತ್ತದೆ ಎಂಬ ಕಥೆಗಳು ನಮ್ಮಲ್ಲಿ ಸಾಕಷ್ಟಿವೆ.
ಉತ್ತರ ಪ್ರದೇಶದ ಪ್ರತಾಪ್‍ಘಡ್, ಜಾನ್‍ಪುರ ಮತ್ತು ಸುಲ್ತಾನಪುರ ಜಿಲ್ಲೆಗಳಲ್ಲಿರುವ 40 ಹಳ್ಳಿಗಳಲ್ಲಿ ಸುಮಾರು 30 ಮಕ್ಕಳು ಜೀವ ಬಿಟ್ಟಿದ್ದರು. ಇವರುಗಳನ್ನು ಕೊಂದಿದ್ದು ಮನುಷ್ಯರೇ ಅಥವಾ ಮೃಗಗಳೋ ಎಂಬ ಭಯ ಹಲವು ವರ್ಷ ಕಾಲ ಕಾಡಿದೆ. ಅಧಿಕಾರಸ್ಥರ ಪ್ರಕಾರ 30 ಮಕ್ಕಳ ಸಾವಿಗೆ ತೋಳ ಕಾರಣವಾಗಿದೆ. ಬೇಟೆಗಾರರು ಇವುಗಳನ್ನು ಬೇಟೆಯಾಡಿ ಕೊಲ್ಲದ ಕಾರಣ, ಬದುಕುಳಿದು ಮಕ್ಕಳನ್ನು ಸಾಯಿಸುತ್ತಿದೆ. ಆದರೆ, ಗ್ರಾಮಸ್ಥರು ಇದಕ್ಕೆ ತದ್ವಿರುದ್ಧವಾಗಿ, ಮಕ್ಕಳ ಸಾವಿಗೆ `ತೋಳ ಮಾನವ’ ಕಾರಣ ಎಂದು ಹೇಳುತ್ತಿದ್ದಾರೆ.










