ಎಷ್ಟೂ ಸುತ್ತಿದರೂ ಸಿಗಲಿಲ್ಲ ಬೆಡ್-ತಾಯಿಯ ಗರ್ಭದಲ್ಲೇ ಕಂದಮ್ಮ ಸಾವು…

228
firstsuddi

ಬೆಂಗಳೂರು : ಮಹಾಮಾರಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ತಾಯಿಯ ಹೊಟ್ಟೆಯಲ್ಲೇ ಮಗು ಮೃತಪಟ್ಟಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ. ಶ್ರೀರಾಂಪುರ ನಿವಾಸಿಯಾಗಿರುವ ಗರ್ಭಿಣಿ ಮಹಿಳೆಗೆ ಇಂದು ಮುಂಜಾನೆ ಮೂರು ಗಂಟೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಟೋ ಮಾಡಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬೆಳಿಗ್ಗೆಯಿಂದಲೂ ವಾಣಿ ವಿಲಾಸ್, ವಿಕ್ಟೋರಿಯಾ, ಶ್ರೀರಾಂಪುರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸುತ್ತಾಡಿದರೂ ಕೂಡಾ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಬಳಿಕ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಗರ್ಭಿಣಿಗೆ ಆಟೋದಲ್ಲಿಯೇ ಹೆರಿಗೆಯಾಗಿದೆ. ಆದರೆ ಸೂಕ್ತ ಸಮಯಕ್ಕೆ ಗರ್ಭಿಣಿಗೆ ಚಿಕಿತ್ಸೆ ದೊರಕದ ಕಾರಣ ಇನ್ನು ಪ್ರಪಂಚವನ್ನೇ ನೋಡದ ಕಂದಮ್ಮ ತಾಯಿಯ ಗರ್ಭದಲ್ಲೇ ಅಸುನೀಗಿದೆ. ಇಂತಹ ಕ್ಲಿಷ್ಠಕರ ಸಂದರ್ಭದಲ್ಲಿ ಆಸ್ಪತ್ರೆಗಳ ದಿವ್ಯ ನಿರ್ಲಕ್ಷ್ಯತನದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.