ಉಡುಪಿ : ಬೇಕರಿ ಉತ್ಪನ್ನಗಳನ್ನು ತಯಾರಿಸುವ ಘಟಕದಲ್ಲಿ ಬೃಹತ್ ಗಾತ್ರದ ಓವನ್ ಸ್ಪೋಟಗೊಂಡು ಬೇಕರಿ ಮಾಲೀಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಐರೋಡಿ-ಮಾಬುಕಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ ಮಾಲೀಕ ರಾಬರ್ಟ್ ಫುರ್ಟಾಡೋ(53) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ ಮೃತ ವ್ಯಕ್ತಿ ಎಂದಿನಂತೆ ಇಂದು ಬೆಳಿಗ್ಗೆ ಕೂಡಾ ತಮ್ಮ ಮನೆಯ ಕೆಳಗಡೆ ಇರುವ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ನಡೆಯುವ ಕೆಲಸಗಳ ಪರಿಶೀಲನೆ ನಡೆಸಲು ತೆರಳಿದ್ದು, ಬ್ರೆಡ್ ತಯಾರಿಸುವ ಓವನ್ ಬಳಿ ಪರಿಶೀಲನೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿ ಓವನ್ ಸ್ಪೋಟಗೊಂಡು ಬಾಗಿಲ ಮುಂದೆ ನಿಂತಿದ್ದ ರಾಬರ್ಟ್ ಅವರಿಗೆ ಬಡಿದಿದ್ದು, ಪರಿಣಾಮ ರಾಬರ್ಟ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬ್ರೆಡ್ ತಯಾರಿಕಾ ಓವನ್ ವಿದ್ಯುತ್ ಮತ್ತು ಗ್ಯಾಸ್ ಮೂಲಕ ನಡೆಯುತ್ತಿದ್ದು, ಸ್ಪೋಟಕ್ಕೆ ನಿಖರ ಕಾರಣ ಏನೆಂಬುವುದು ಇನ್ನಷ್ಠೆ ತಿಳಿಯಬೇಕಾಗಿದೆ. ಘಟನೆ ನಡೆಯುವ ವೇಳೆ ಕೆಲವೇ ಕಾರ್ಮಿಕರು ಘಟಕದಲ್ಲಿದ್ದು, ಭಾರಿ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಮತ್ತೋರ್ವ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಉಡುಪಿ ಅಗ್ನಿಶಾಮಕ ದಳ ಸಿಬ್ಬಂದಿ, ಕೋಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










