ಗಣೇಶ ಚತುರ್ಥಿ ಆಚರಣೆಯ ಹಿನ್ನೆಲೆ ಏನು ಗೊತ್ತಾ..?

496

ಗಣೇಶ ಚತುರ್ಥಿ ಆಚರಣೆಯ ಹಿನ್ನೆಲೆ ಏನು ಗೊತ್ತಾ..?BY:Raghavendra kesavalaluhttps://www.youtube.com/c/FirstSuddi

Posted by Firstsuddi N EW S on Thursday, 20 August 2020

ಗಣೇಶ ಚತುರ್ಥಿ. ನಾಡಿನ ಮನೆಮನಗಳಲ್ಲಿ ಸಂಬಂಧ-ಸೌಹಾರ್ದತೆ ಬೆಳೆಸೋ ಹಬ್ಬ. ಸ್ನೇಹಿತರನ್ನ ಒಂದುಗೂಡಿಸೋ ಊರಬ್ಬ. ಜಾತಿ-ಧರ್ಮ-ಭೇದ ಮರೆತು ಬೀದಿಗೊಬ್ಬ ಗಣೇಶನನ್ನ ಕೂರಿಸೋ ಖುಷಿ ಪಡೋ ಚೌತಿ. ಅಕ್ಕ-ತಂಗಿಯರಿಗೆ ಬಾಗಿಣ ರೂಪದಲ್ಲಿ ಉಡುಗೊರೆ ನೀಡಿ ಖುಷಿ ಪಡೋ ಹೆಣ್ಮಕ್ಕಳ ಹಬ್ಬ. ಅಕ್ಕ-ತಂಗಿಯರಿಗೆ ಅರಿಶಿಣ-ಕುಂಕುಮ ನೀಡಿ ಆಶೀರ್ವದಿಸೋ ಗಂಡೈಕಳ ಗೌರಿಹಬ್ಬ. ಅಂದು ಸಂಘಟನೆಗೋಸ್ಕರ ಹುಟ್ಟಿಕೊಂಡ ಹಬ್ಬ ಇಂದು ಸಂಬಂಧಗಳ ಬೆಸೆಯೋ ಹಬ್ಬವಾಗಿದ್ದು, ಅದೇ ಗೌರಿ-ಗಣೇಶ ಹಬ್ಬ. ಇಡೀ ದೇಶವೇ ಆಚರಿಸೋ ಹೆಮ್ಮೆಯ ಹಬ್ಬ…..

ಹೌದು…. ಇನ್ನ ನಾಳೆ ಗೌರಿ ಹಬ್ಬ. ಗೌರಿ ಬರ್ತಾಳೆ. ಶನಿವಾರ ಗಣೇಶ ಬರ್ತಾನೆ. ಪ್ರತಿ ವರ್ಷ ಈ ವೇಳೆಗಾಗಲೇ ಬೀದಿ-ಬೀದಿಯಲ್ಲಿ ಮಂಟಪ ರೆಡಿ ಮಾಡಿ ಗಣೇಶನನ್ನ ತರಲು ದೇಶವೇ ತುದಿಗಾಲಲ್ಲಿ ಇರುತ್ತಿತ್ತು. ಆದ್ರೆ, ಈ ವರ್ಷ ಕ್ರೂರಿ ಕೊರೋನಾದಿಂದ ಅದು ಸಾಧ್ಯವಾಗಿಲ್ಲ. ಅದು ಹಾಗಿರಿಲಿ. ಆದ್ರೆ, ಗಣೇಶ ಹಬ್ಬ ಅಂದು ರಾಷ್ಟ್ರಕ್ಕಾಗಿ ಹುಟ್ಟಿಕೊಂಡ ಆಚರಣೆ. ಲೋಕಮಾನ್ಯ ಬಾಲಗಂಗಾಧರ್ ತಿಲಕ್ರವರು ಸ್ವಾತಂತ್ರ್ಯಕ್ಕೆ ಜಾತಿ-ಭೇದ ಮರೆತು ದೇಶಕ್ಕಾಗಿ ಹೋರಾಡಲು ಯುವಸಮೂಹವನ್ನ ಸೆಳೆಯಲು ಸಾರ್ವಜನಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದರು. ಅಂದಿನಿಂದ ಅದೇ ಹಾದಿಯಲ್ಲಿ ಸಾಗಿ ಬಂದಿದೆ. ದೇಶಾದ್ಯಾಂತ ಈ ಹಬ್ಬವನ್ನ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸ್ತಾರೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕ, ತಮಿಳುನಾಡಿ ಸೇರಿದಂತೆ ದಕ್ಷಿಣ ಭಾರತದಲ್ಲಿ ವಿಜೃಂಬಣೆಯಿಂದ ಚೌತಿಯನ್ನ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಹರ್ತಲಿಕಾ ಎಂದು ಕರೆಯೋ ಈ ಹಬ್ಬವನ್ನ ಅಷ್ಟೆ ಜೋರಾಗಿ ಆಚರಿಸುತ್ತಾರೆ. ಅದರಲ್ಲೂ ಮುಂಬೈನಲ್ಲೂ ಈ ಹಬ್ಬ ಮತ್ತಷ್ಟು ಜೋರಿದ್ದು ಇಡೀ ಮುಂಬೈ ಹಬ್ಬದಂತಿರುತ್ತೆ.

ನಾಡಿನ ಹಲವು ಹಬ್ಬಗಳಲ್ಲಿ ಈ ಗೌರಿ-ಗಣೇಶ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿ ಗಣಪತಿಗೆ ಎಷ್ಟು ಪ್ರಾಮುಖ್ಯತೆ ಇದ್ಯೋ ತಾಯಿ ಗೌರಿಗೂ ಅಷ್ಟೆ ಪ್ರಾಮುಖ್ಯತೆ ಇದೆ. ಗಣೇಶನ ಹಬ್ಬದ ಹಿಂದಿನ ದಿನ ಗೌರಿಹಬ್ಬವನ್ನ ಆಚರಿಸಲಾಗುತ್ತೆ. ಇನ್ನೂ ಕೆಲವೆಡೆ ಒಂದು ದಿನ ಮುಂಚಿತವಾಗಿ ಗೌರಿಯನ್ನೇ ಮನೆಗೆ ತಂದು ವಿಶೇಷವಾಗಿ ಮನಸ್ಸಿಗೊಪ್ಪುವಂತೆ ಗೌರಿಯನ್ನ ಅಲಂಕರಿಸಿ ವಿವಿಧ ನೈವೇದ್ಯಗಳಿಂದ ಪೂಜೆ ಮಾಡಲಾಗುತ್ತೆ. ಇದರ ಜೊತೆ ಮದುವೆಯಾದ ಹೆಣ್ಣು ಮಗಳಿಗೆ ತವರು ಅಥವ ಅಣ್ಣ-ತಮ್ಮಂದಿಗರು ಬಾಗಿನ ಕೊಡುವ ಪದ್ಧತಿಯೂ ಚಾಲ್ತಿಯಲ್ಲಿದೆ. ಕೆಲವರು ಉಡುಗೊರೆಯನ್ನೂ ಕೊಡುತ್ತಾರೆ. ಆದರೆ, ಎಷ್ಟೆ ದೊಡ್ಡ ಉಡುಗೊರೆ ಕೊಟ್ಟರು ಅದರಲ್ಲಿ ಅರಿಶಿನ-ಕುಂಕುಮಕ್ಕೆ ಅಗ್ರಸ್ಥಾನ. ಗೌರಿಗಣೇಶ ಹಬ್ಬ ಅಂದ್ರೆ ಹೆಣ್ಣುಮಕ್ಕಳಿಗೂ ಎಲ್ಲಿಲ್ಲದ ಸಂತಸ. ಖುಷಿ. ಈ ಹಬ್ಬವನ್ನ ಹೆಣ್ಮಕ್ಕಳ ಹಬ್ಬ ಅಂತಲೂ ಕರೆಯುತ್ತಾರೆ.

ನಾಳೆ ಗೌರಿ ಹಬ್ಬವಾದ್ರೆ, ಶನಿವಾರ ಗಣೇಶನ ಹಬ್ಬ. ಹೆಣ್ಮಕ್ಕಳಿಗೆ ಮೀಸಲಾದ ಈ ಹಬ್ಬದಂದು ಮದುವೆಯಾದ ಹೆಣ್ಣು ಮಕ್ಕಳಿಗೆ ತವರು ಮನೆ ಅಥವ ಅಣ್ಣ-ತಮ್ಮಂದಿರು ಬಾಗಿನ ಕೊಡುತ್ತಾರೆ. ಮುತ್ತೈದೆಯರಿಗೆ ಅರಿಶಿನ-ಕುಂಕುಮ ಕೊಡುತ್ತಾರೆ. ಶಕ್ತಿ ದೇವತೆ ಗೌರಿಯನ್ನ ಶ್ರದ್ಧಾ-ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ಬೇಡಿಕೆಗಳು ಈಡೇರುತ್ತೆ ಅನ್ನೋ ನಂಬಿಕೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಇಂದಿಗೂ ಹೆಣ್ಣು ಮಕ್ಕಳು ಗೌರಿಗೆ ಹರಕೆ ಕಟ್ಟಿಕೊಂಡು, ಮುಂದಿನ ವರ್ಷ ಹರಕೆ ತೀರಿಸುತ್ತಾರೆ. ಗಣೇಶನ ಹಬ್ಬದ ಹಿಂದಿನ ದಿನ ಪ್ರತಿಯೊಬ್ಬರು ಗೌರಿ ಹಬ್ಬ ಮಾಡುತ್ತಾರೆ. ಈ ದಿನವನ್ನ ಗೌರಿ ತವರು ಮನೆಗೆ ಬಂದ ದಿನವೆಂಬ ನಂಬಿಕೆ ಹಿರಿಯರದ್ದು. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಗೌರಿ ಹಬ್ಬ ಆಚರಿಸುತ್ತಾರೆ. ಮದುವೆಯಾದ ಮೊದಲ ವರ್ಷ ಮಗಳು-ಅಳಿಯ ತವರು ಮನೆಯಲ್ಲೇ ಗೌರಿ ಹಬ್ಬ ಮಾಡಬೇಕು ನಂಬಿಕೆಯೂ ಇದೆ. ಆ ನಂಬಿಕೆ ಇಂದಿಗೂ ನಡೆದುಕೊಂಡು ಬರುತ್ತಿದೆ.

ಹೊಸಬಟ್ಟೆಯುಟ್ಟ ಮಹಿಳೆಯರು ಗೌರಿಗೂ ವಿಶೇಷ ಅಲಂಕಾರ ಮಾಡುತ್ತಾರೆ. ದೇವಿಗೆ ಅರಿಶಿನ-ಕುಂಕುಮದಿಂದ ಅಲಂಕಾರ ಮಾಡಿ, ಬಣ್ಣ-ಬಣ್ಣದ ಹೂಗಳಿಂದ ಅಲಂಕರಿಸಿ ಪೂಜೆಗೈದು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ತಟ್ಟೆಯಲ್ಲಿ ಅಕ್ಕಿ ತುಂಬಿ ಅಥವ ಧಾನ್ಯಗಳ ಮೇಳೆ ದೇವಿಯನ್ನ ಕೂರಿಸುತ್ತಾರೆ. 1-3-5 ದಿನದವರೆಗೆ ಗೌರಿಯನ್ನ ಕೂರಿಸಿ ತದನಂತರ ಗಣೇಶನ ಜೊತೆ ವಿಸರ್ಜಿಸುತ್ತಾರೆ. ಕೆಲವರು ಗೌರಿ ದೇವಿಯನ್ನ ಮಾತ್ರ ಕೂರಿಸುತ್ತಾರೆ. ನಾಡಿನ ಕೆಲ ಭಾಗಗಳಲ್ಲಿ ಗಣಪತಿ ಹಬ್ಬ ಆರಂಭವಾದ ಐದನೇ ದಿನ ಗೌರಿ ಗ್ರಾಮದೊಳಗೆ ಪಲ್ಲಕ್ಕಿಯಲ್ಲಿ ಕೂತು ಬರುತ್ತಾರೆ. ಆಗ, ಜನ ರಸ್ತೆಗೆ ನೀರು ಹಾಕಿ ದೇವಿಯನ್ನ ಸ್ವಾಗತಿಸಿಕೊಳ್ಳೋ ಪದ್ಧತಿ ಇಂದಿಗೂ ಇದೆ. ಶ್ರಾವಣದಲ್ಲಿ ಮಾಂಸಹಾರ ಸೇವಿಸದ ಜನ ಗೌರಿ ನೀರಿಗೆ ವಿಸರ್ಜನೆಯಾದ ಮೇಲೆ ಮಾಂಸಹಾರ ಸೇವಿಸುತ್ತಾರೆ. ಗಣಪತಿ ಹಬ್ಬದ ಐದನೇ ದಿನದ ಬಳಿಕ ಗೌರಿ ವಿಸರ್ಜನೆಗೊಂಡ ಬಳಿಕ ಬಹುತೇಕರು ಮಾಂಸಹಾರ ಸೇವಿಸೋ ಪದ್ಧತಿ ಇಂದಿಗೂ ರೂಢಿಯಲ್ಲಿದೆ.

ಗೌರಿ ಹಬ್ಬದಂದು ಕೈಗೆ ಗೌರಿ ಎಳೆ ಕಟ್ಟಿಕೊಳ್ಳುತ್ತಾರೆ. ಇದನ್ನ ಗೌರಿ ದಾರ ಎಂದೂ ಕರೆಯುತ್ತಾರೆ. ಮನೆಯಲ್ಲಿ ಶಾಂತಿ, ಮನಸ್ಸಿಗೆ ನೆಮ್ಮದಿ, ಸಂಬಂಧದಲ್ಲಿ ವೃದ್ಧಿಗಾಗಿ ಈ ಗೌರಿಎಳೆಯನ್ನ ಕಟ್ಟಿಕೊಳ್ತಾರೆ ಎಂದು ಹೇಳಲಾಗುತ್ತೆ. ಆದ್ರೆ, ಈ ವರ್ಷ ಹೆಮ್ಮಾರಿ ಕೋರೋನಾದಿಂದ ನಾಡಿನ ಮನೆ-ಮನಗಳಷ್ಟೆ ಗೌರಿಹಬ್ಬ ಆಚರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಕೋರೋನ ನಿಯಂತ್ರಿಸುವ ಸಲುವಾಗಿ ಸರ್ಕಾರ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ನಿಷೇಧ ಹೇರಿದೆ. ಅದೇನೆ ಇರಲಿ, ಕೊರೋನ ನಿಯಂತ್ರಣಕ್ಕೆ ಬಂದರೆ ಮುಂದಿನ ವರ್ಷವೂ ಹಬ್ಬ ಮಾಡಬಹುದು. ಆದಷ್ಟು ಬೇಗ ಈ ಹೆಮ್ಮಾರಿ ತೊಲಗಲಿ ಎಂದು ನಾವು-ನೀವೆಲ್ಲರೂ ಗೌರಿ-ಗಣೇಶನಿಗೆ ಪ್ರಾರ್ಥಿಸೋಣ. ಜೊತೆಗೆ, ನಾಡಿನ ಸಮಸ್ತ ಜನತೆಗೆ ಫಸ್ಟ್ ಸುದ್ದಿ ಬಳಗದಿಂದ ಗೌರಿ-ಗಣೇಶ ಹಬ್ಬದ ಶುಭಾಷಯಗಳು…..