ಬೆಂಗಳೂರು : ಗ್ರಾಮ ಪಂಚಾಯಿತಿ ಚುನಾವಣೆಯ ಸಂಬಂಧ ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜೊತೆ ಐದು ಮಂದಿಗೆ ಮಾತ್ರ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಅಭ್ಯರ್ಥಿ ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ. ಇವು ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯ ನಿರ್ವಹಣಾ ವಿಧಾನ(ಎಸ್ಒಪಿ) ಯ ಕರುಡು ಮಾರ್ಗ ಸೂಚಿಗಳು.
ಚುನಾವಣಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಚುನಾವಣಾ ಕೊಠಡಿ ಪ್ರವೇಶಿಸುವ ಮುನ್ನ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಜೊತೆಗೆ ದೈಹಿಕ ಉಷ್ಣಾಂಶ ಪರೀಕ್ಷೆ ಮಾಡಿಸಿಕೊಳ್ಳುವ ಜೊತೆಗೆ ಸಾಧ್ಯವಾದಷ್ಟು ವಿಶಾಲವಾದ ಕೊಠಡಿಯಲ್ಲಿ ಚುನಾವಣಾ ಕೆಲಸ ನಡೆಸಬೇಕು ಎಂದು ಹೇಳಿದೆ.
ಚುನಾವಣೆಗೆ ಸಂಬಂಧಿಸಿದ ಕಡತಗಳು, ದಸ್ತಾವೇಜುಗಳು ಸಂಪೂರ್ಣವಾಗಿ ಸೋಂಕು ನಿವಾರಕ ಕೊಠಡಿಯಲ್ಲಿ ಬಿಡಬೇಕು. ಜೊತೆಗೆ ಅದರ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಅವರು ಮಾತ್ರ ಒಳಗೆ ಹೋಗಲು ಅವಕಾಶ ಕಲ್ಪಿಸಿ ಹೊಸ ಕರಡು ಮಾರ್ಗ ಸೂಚಿಯಲ್ಲಿ ಪ್ರಕಟಿಸಲಾಗಿದೆ.
ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸುವ ವೇಳೆ ಫೇಸ್ ಮಾಸ್ಕ್ ಧರಿಸಬೇಕು. ಕೈಗಳಿಗೆ ಕಡ್ಡಾಯವಾಗಿ ಗ್ಲೌಸ್ ಧರಿಸಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಮತ್ತು ಒಬ್ಬ ಸೂಚಕನಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿ ಪ್ರವೇಶಿಸಲು ಅವಕಾಶವಿರುತ್ತದೆ. ಕೊರೊನಾ ಪಾಸಿಟಿವ್ ವ್ಯಕ್ತಿ ನಾಮಪತ್ರ ಸಲ್ಲಿಸಲು ಇಚ್ಚಿಸಿದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದೆ.
ನಾಮಪತ್ರ ಪರಿಶೀಲನೆ ವೇಳೆ ಕ್ಷೇತ್ರವಾರು ಹಾಜರಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಾಡಬೇಕು. ಚುನಾವಣಾ ಪ್ರಚಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಐದು ಮಂದಿಗೆ ಮಾತ್ರ ಪ್ರಚಾರ ಮಾಡಲು ಅವಕಾಶವಿರುತ್ತದೆ. ಪ್ರಚಾರದ ವೇಳೆ ಫೇಸ್ ಮಾಸ್ಕ್ ಧರಿಸಬೇಕು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎನ್ನುವ ನಿರ್ಬಂಧ ವಿಧಿಸಲಾಗಿದೆ.
ಮತದಾನದ ದಿನ ಮತಗಟ್ಟೆ ಅಧಿಕಾರಿಗಳು ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಬೇಕು. ಮತದಾರರು ಫೇಸ್ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕು. ಮತದಾನ ಕೊಠಡಿ ಪ್ರವೇಶಿಸುವ ವೇಳೆ ಕೋವಿಡ್ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಕಡ್ಡಾಯವಾಗಿ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ತನ್ನ ಹತ್ತು ಪುಟಗಳ ಸುದೀರ್ಘ ಮಾರ್ಗಸೂಚಿಯನ್ನು ಅಧಿಕೃತ ಪ್ರಕಟಣೆಯಲ್ಲಿ ಸೂಚಿಸಿದೆ.
ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುತ್ತಿದ್ದಂತೆ ತಾವು ಚುನಾವಣೆಯನ್ನು ನಡೆಸಲು ಸಿದ್ಧವಿರುವುದಾಗಿ ಈಗಾಗಲೇ ಸರ್ಕಾರ ಪ್ರಕಟಿಸಿದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಕೇಂದ್ರ ಗೃಹ ಸಚಿವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ನಿಯಂತ್ರಣಕ್ಕೆ ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಅದರಂತೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ತಜ್ಞರೊಂದಿಗೆ 2020 ಆಗಸ್ಟ್ 18ರಂದು ಚರ್ಚಿಸಿದ್ದು, ಅವರ ಸಲಹೆಗಳನ್ನು ಪರಿಗಣಿಸಿ ಎಸ್ಒಪಿ ರಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.










