ಉಡುಪಿ : ತಮ್ಮ ಮಗಳಿಗೆ “ಸೈನ್ಯ” ಎಂಬ ಹೆಸರಿಟ್ಟು ದೇಶಪ್ರೇಮ ಮೆರೆದ ಸೈನಿಕ…

177
firstsuddi

ಉಡುಪಿ : ಇತ್ತೀಚೆಗೆ ಜಿಲ್ಲೆಯ ಕನ್ನಡ ಅಭಿಮಾನಿಯೊಬ್ಬರು ತಮ್ಮ ಮಗಳಿಗೆ ಕನ್ನಡ ಎಂದು ಹೆಸರಿಟ್ಟು ಕನ್ನಡಾಭಿಮಾನ ಮೆರೆದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ನಮ್ಮ ದೇಶ ಕಾಯುವ ಸೈನಿಕರೊಬ್ಬರು ತಮ್ಮ ಮಗಳಿಗೆ ಸೈನ್ಯ ಎಂಬ ಹೆಸರಿಡುವ ಮೂಲಕ ದೇಶ ಪ್ರೇಮವನ್ನು ಮೆರೆದಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿಯ ಸೈನಿಕ ಪ್ರಶಾಂತ್ ಪೂಜಾರಿ-ಆಶಾ ದಂಪತಿ ಅವರು ತಮ್ಮ ಮಗುವಿಗೆ ಸೈನ್ಯ ಎಂದು ನಾಮಕರಣ ಮಾಡಿದ್ದಾರೆ. ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಪ್ರಶಾಂತ್ ಪೂಜಾರಿ ಅವರು ತಮ್ಮ ಮಗುವಿಗೆ ಸೈನ್ಯ ಎಂಬ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವವನ್ನು ತೋರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯೋಧ ಪ್ರಶಾಂತ್ ಪೂಜಾರಿ ಅವರು, ಮಗುವಿಗೆ ಯಾವ ಹೆಸರಿಡಬೇಕೆಂಬ ಚರ್ಚೆ ಮಾಡುತ್ತಿದ್ದ ವೇಳೆ ನನಗೆ ಸೈನ್ಯ ಎಂದು ಯಾಕೆ ಹೆಸರಿಡಬಾರದು ಎಂಬ ಆಲೋಚನೆ ಬಂತು. ಬಳಿಕ ಈ ಕುರಿತು ಕುಟುಂಬಸ್ಥರೊಂದಿಗೆ ಚರ್ಚಿಸಿ ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕ ಬಳಿಕ ಮಗುವಿಗೆ ಸೈನ್ಯ ಎಂಬ ಹೆಸರನ್ನು ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.