ಶಿವಮೊಗ್ಗ : ಜಲಪಾತ ವೀಕ್ಷಣೆಗೆ ಬಂದು 80 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದ ಓರ್ವ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ. ಹಾಸನ ಮೂಲದ ಅಮೋಘ, ತಮಿಳುನಾಡು ಮೂಲದ ಸಂಜೀವ್, ಜೈಪುರ ಮೂಲದ ಮಧು ಎಂಬುವವರು ಶನಿವಾರ ಕೊಡಚಾದ್ರಿ ಪ್ರವಾಸಕ್ಕೆಂದು ಆಗಮಿಸಿ ಹೋಂಸ್ಟೇಯಲ್ಲಿ ಉಳಿದುಕೊಂಡಿದ್ದರು. ಬಳಿಕ ಭಾನುವಾರ ಬೆಳಗ್ಗಿನ ಜಾವ ಯುವಕರು ಜೀಪ್‍ನಲ್ಲಿ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟದತ್ತ ತೆರಳಿ ಬಳಿಕ ಹಿಡ್ಲಮನೆ ಜಲಪಾತಕ್ಕೆ ತೆರಳಿದ್ದರು. ಮೂವರು ಯುವಕರು ಜಲಪಾತದ ಕೆಳಭಾಗದಿಂದ ಮೇಲ್ಭಾಗಕ್ಕೆ ತೆರಳಿದ್ದರು. ಜಲಪಾತ ವೀಕ್ಷಣೆ ಬಳಿಕ ಅಮೋಘ ಎಂಬುವವರು ಜಲಪಾತದ ಪಕ್ಕದಲ್ಲೇ ಕೆಳಗಿಳಿಯಲು ಯತ್ನಿಸಿದ್ದಾರೆ. ಆದರೆ ಮೇಲೆ ಹತ್ತಲು ಆಗದೇ, ಕೆಳಗೆ ಇಳಿಯಲು ಆಗದೆ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಉಳಿದ ಇಬ್ಬರು ಬೇರೆ ಮಾರ್ಗವಾಗಿ ಕೆಳಗೆ ಇಳಿದಿದ್ದರು.
ಯುವಕ ಅಪಾಯದಲ್ಲಿ ಸಿಲುಕಿರುವುದನ್ನು ಕಂಡ ಇಬ್ಬರು ಯುವಕರು ಭಯದಿಂದ ಕೂಗಿಕೊಂಡಿದ್ದಾರೆ. ಬಳಿಕ ಕೂಡಲೇ ಸ್ಥಳದಲ್ಲೇ ಇದ್ದ ಕೆಲವು ಪ್ರವಾಸಿಗರು ಹಾಗೂ ಸ್ಥಳಿಯರು ಧಾವಿಸಿ ಕೆಳಗೆ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗದೆ ಇದ್ದುದರಿಂದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ವನ್ಯಜೀವಿ ಇಲಾಖೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮ ದಳ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಹಗ್ಗವನ್ನು ಬಳಸಿಕೊಂಡು ಜಲಪಾತದ ಮಧ್ಯ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.










