ಚಿಕ್ಕಮಗಳೂರು : ಕಾಂಗ್ರೇಸ್ ಮತ್ತು ಬಿಜೆಪಿಯನ್ನು ಚುನಾವಣೆಯಲ್ಲಿ ಅಧಿಕಾರದಿಂದ ದೂರವಿಡುವ ಮೂಲಕ ರಾಷ್ಟ್ರವನ್ನು ಉಳಿಸಬೇಕು : ದಿನೇಶ್ ಗೌತಮ್.

190
firstsuddi

ಚಿಕ್ಕಮಗಳೂರು : ಕಾಂಗ್ರೇಸ್ ಮತ್ತು ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರದಿಂದ ದೂರವಿಡುವ ಮೂಲಕ ದೇಶದ ಜನತೆ ರಾಷ್ಟ್ರವನ್ನು ಉಳಿಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಸಲಹೆ ಮಾಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೇಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಹಣ, ಹೆಂಡ ಹಂಚಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರುವ ಈ ಎರಡೂ ಪಕ್ಷಗಳು ಕಳೆದ 7 ದಶಕಗಳಲ್ಲಿ ದೇಶವನ್ನು ಲೂಟಿ ಹೊಡೆದಿವೆ, ಇಂತಹ ಅಪ್ರಮಾಣಿಕರ ಕೈಯಲ್ಲಿ ಸಿಕ್ಕಿ ರಾಷ್ಟ್ರದ ಸಂವಿಧಾನ ಛಿದ್ರವಾಗಿದೆ ಎಂದು ಆರೋಪಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಿಎಸ್‍ಟಿ, ಲಾಕ್‍ಡೌನ್ ಹೇರುವ ಮೂಲಕ 20 ಕೋಟಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ, ರಾಷ್ಟ್ರದಲ್ಲಿ ಕೋಮುವಾದ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕ್ಷೀಣಿಸಿ ಪರೋಕ್ಷ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ದೂರಿದರು.
ಕಾಂಗ್ರೇಸ್ ಮತ್ತು ಬಿಜೆಪಿ ಕಳೆದ 7 ದಶಕಗಳಲ್ಲಿ ಏನು ಅಭಿವೃದ್ದಿ ಮಾಡಿದೆ ಎಂಬುದರ ಬಗ್ಗೆ ದೇಶದ ಜನತೆ ಚಿಂತನೆ ನಡೆಸಬೇಕು, ಎಲ್ಲರಿಗೂ ಸಮಬಾಳು ಮತ್ತು ಸಮಪಾಲು ಹಾಗೂ ಸಾಮಾಜಿಕ ಪರಿವರ್ತನೆಗಾಗಿ ಮುಂಬರುವ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಹಸಿವಿನಿಂದ ಸಾಯುತ್ತಿರುವ ದೇಶಗಳ ಪೈಕಿ ಭಾರತ 94ನೇ ಸ್ಥಾನದಲ್ಲಿದೆ ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಎಂದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ದೇಶದ ಜನತೆಯ ಮೇಲೆ, ತೆರಿಗೆಗಳ ಮೇಲೆ ತೆರಿಗೆಗಳನ್ನು ಹಾಕುವ ಮೂಲಕ ಅವರನ್ನು ಜರ್ಝರಿತರನ್ನಾಗಿಸಿದೆ,ಸಾರ್ವಜನಿಕ ಕ್ಷೇತ್ರಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ಸಂವಿಧಾನ ಉಳಿದು ಯಥಾವತ್ತಾಗಿ ಜಾರಿಯಾಗಬೇಕಾದರೆ ದೇಶದಲ್ಲಿ ಸಾಮಾಜಿಕ ಪರಿವರ್ತನೆಯಾಗಿ ಅಭಿವೃದ್ದಿಯಾಗಬೇಕಾದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಪ್ರಧಾನಿಯಾಗಬೇಕು, ರಾಷ್ಟ್ರದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಎಸ್‍ಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಮಾವೇಶದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ರಾಜ್ಯ ಉಸ್ತುವಾರಿ ರಮೇಶ್‍ಚಂದ್ರ ಭಾರತಿ, ಮುಖಂಡರಾದ ಪಿ.ವೇಲಾಯುಧನ್, ಪಿ.ಪರಮೇಶ್ವರ್, ಬಕ್ಕಿ ಮಂಜುನಾಥ್, ಪಿ.ಕೆ.ಮಂಜುನಾಥ್, ಕೆ.ಆರ್.ಗಂಗಾಧರ್, ಕೆ.ಎಂ.ಗೋಪಾಲ್, ಹೆಚ್.ಜಗದೀಶ್, ಕುಮಾರ್, ವಾಹೀದ್ ಜಾನ್, ಕೆ.ಬಿ.ಸುಧಾ, ಕೆ.ಎಸ್.ಮಂಜುಳಾ, ಹರೀಶ್ ಮಿತ್ರ, ಬಿ.ಎಂ.ಶಂಕರ್, ಕೆ.ಎಂ.ಗೋಪಾಲ್, ಸವಿತಾ ಉಪಸ್ಥಿತರಿದ್ದರು.