ಮಂಡ್ಯ : ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಂಪ್ ದಾಟುವಾಗ ಅಮ್ಮನ ಕೈಯಿಂದ ಒಂದು ವರ್ಷದ ಮಗು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಿರಗಂದೂರು ಗ್ರಾಮದ ಬಳಿ ನಡೆದಿದೆ. ಚಂದಗಾಲು ಗ್ರಾಮದ ಶಿವಕುಮಾರ್ ಹಾಗೂ ರಂಜಿತಾ ದಂಪತಿ ತಮ್ಮ ಒಂದು ವರ್ಷದ ಮಗುವಿನೊಂದಿಗೆ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿಕೊಂಡು ತಮ್ಮ ಬೈಕ್ ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಿರಗಂದೂರು ಗ್ರಾಮದ ಬಳಿ ರಸ್ತೆಯಲ್ಲಿದ್ದ ಹಂಪ್ಸ್ ದಾಟುತ್ತಿದ್ದಾಗ ತಾಯಿ ಮಡಿಲಲ್ಲಿ ಕುಳಿತಿದ್ದ ಮಗು ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಕೂಡಲೇ ಮಗುವನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.










