ದಾವಣಗೆರೆ : ಮರಾಠ ಸಮುದಾಯ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ.5ರಂದು ಕರ್ನಾಟಕ ಬಂದ್ ಮಾಡಲು ಮುಂದಾಗಿದ್ದು, ಈ ಬಂದ್ ಯಶಸ್ವಿಯಾಗುವುದಿಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಟಾಳ್ ನಾಗರಾಜ್ ಓರ್ವ ನಕಲಿ ಹೋರಾಟಗಾರ. ದೊಂಬರಾಟ, ಪ್ರಚಾರಕ್ಕಾಗಿ ಹೋರಾಟ ಮಾಡುತ್ತಾರೆ. ವಾಟಾಳ್ ನಾಗರಾಜ್ ಬುಟಾಟಿಕೆ ವ್ಯಕ್ತಿ. ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್ ಯಶಸ್ವಿಯಾಗಲು ಬಿಡುವುದಿಲ್ಲ. ವಾಟಾಳ್ ನಾಗರಾಜ್ ಅವರು ಎಷ್ಟು ಅಕ್ರಮ ಮಾಡಿದ್ದಾರೆ ಎಂದು ನಮಗೂ ತಿಳಿದಿದೆ. ಮಗಳು ಹಾಗೂ ಅಳಿಯನ ಹೆಸರಿನಲ್ಲಿ ಎಷ್ಟೋ ಅಕ್ರಮ ಗಳಿಕೆಯನ್ನು ಮಾಡಿದ್ದಾರೆ. ವಾಟಾಳ್ ನಾಗರಾಜ್ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜಮೀನನ್ನು ಒತ್ತುವರಿ ಮಾಡಿದ್ದಾರೆ. ಅಲ್ಲದೇ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಜಮೀನು ಮಾಡಿಲ್ವಾ? ನಿಮ್ಮ ಜಮೀನಿನಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರಾ..? ತಮಿಳಿಗರಾ..? ಎಂಬುವುದು ನಮಗೂ ತಿಳಿದಿದೆ. ಸುಮಾರು 73 ಎಕರೆ ಜಮೀನು ಒತ್ತುವರಿ ಮಾಡಿಲ್ವಾ? ಮುಖ್ಯಮಂತ್ರಿಗಳಿಗೆ ಎಷ್ಟು ಅನುಭವವಾಗಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ಯಾವ್ಯಾವ ಮುಖ್ಯಮಂತ್ರಿ ಬಳಿ ಏನೆಲ್ಲಾ ಕೆಲಸ ಮಾಡಿಕೊಂಡಿದ್ದಾರೆ ಎಂದು ನಮಗೂ ತಿಳಿದಿದೆ. ವಾಟಾಳ್ ನಾಗರಾಜ್ ಬಂದ್ ಮಾಡುವಾಗ ನಾವೇನು ಕೈಕಟ್ಟಿ ಕುಳಿತುಕೊಳ್ಳುತ್ತೇವ.. ಈ ಬಂದ್ ಯಶಸ್ವಿಯಾಗಲ್ಲ. ನಿನಗೆ ತಾಕತ್ತಿದ್ದರೆ ಬಂದ್ ಮಾಡಿಸು ನೊಡೋಣ ಎಂದು ಏಕಾವಚನದಲ್ಲೆ ವಾಗ್ದಾಳೀ ನಡೆಸಿದರು.










