ಮೂಡಿಗೆರೆ : ತೇಜಸ್ವಿ ಅವರ ಕರ್ವಾಲೊ ಕಾದಂಬರಿ ವಿಸ್ಮಯದ ಬೆನ್ನು ಹತ್ತಿದ್ದ ಕಥಾನಕವಾಗಿದೆ : ಡಾ.ಎಚ್.ಎಸ್ ಸತ್ಯನಾರಾಯಣ.

274
firstsuddi

ಕೊಟ್ಟಿಗೆಹಾರ : ತೇಜಸ್ವಿ ಅವರ ಕರ್ವಾಲೊ ಕಾದಂಬರಿ ವಿಸ್ಮಯದ ಬೆನ್ನು ಹತ್ತಿದ್ದ ಕಥಾನಕವಾಗಿದೆ ಎಂದು ಖ್ಯಾತ ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಅವರು ಹೇಳಿದರು.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ನಡೆದ ತೇಜಸ್ವಿ ಓದು ಸರಣಿ ಕಾರ್ಯಕ್ರಮದ ಸಾಮಾಜಿಕ ಜಾಲತಾಣದ ನೇರಪ್ರಸಾರದಲ್ಲಿ ಕರ್ವಾಲೊ ಕಾದಂಬರಿಯ ಕುರಿತು ಅವರು ಮಾತನಾಡಿದರು.
ಕರ್ವಾಲೊ ಕಾದಂಬರಿ ದೇಶ ವಿದೇಶದ ಅನೇಕ ಭಾಷೆಗಳಿಗೆ ಅನುವಾದವಾಗಿದೆ. ಸುಮಾರು 100 ವಿಮರ್ಶೆಗಳು ಕರ್ವಾಲೊ ಕಾದಂಬರಿಯ ಬಗ್ಗೆ ಬಂದಿದೆ. ಬಹುಮುಖ್ಯ ವಿಮರ್ಶಕರು ಕರ್ವಾಲೊ ಕೃತಿಗೆ ಮುಖಾಮುಖಿಯಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಈ ಕಾದಂಬರಿಯ ಮೂಲಕ ಓದುಗರನ್ನು ಬೆರಗಿನ ಪ್ರಪಂಚಕ್ಕೆ ಕರೆದೊಯ್ಯುವುದು ತೇಜಸ್ವಿ ಅವರ ಉದ್ದೇಶ ಅಲ್ಲ. ಒಂದು ಬಗ್ಗೆಯ ಕ್ರಿಯಾತ್ಮಕ ಸಾಧ್ಯತೆಗಳ ವಿಚಾರದಲ್ಲಿ ಎಲ್ಲರಲ್ಲಿ ಜಾಗೃತಿಯನ್ನು ಬಡಿದೆಬ್ಬಿಸುವಂತದ್ದು ಕರ್ವಾಲೊ ಕಾದಂಬರಿ ಪ್ರಧಾನ ಆಶಯ ಎಂದರು.
ಕಾದಂಬರಿಯ ಹಾಸ್ಯಶೈಲಿಯೂ ಕೂಡ ಬಹುಮುಖ್ಯವಾದ ಅಂಶವಾಗಿದೆ. ಕರ್ವಾಲೊ ಪಾತ್ರ ಕನ್ನಡ ಸಾಹಿತ್ಯದ ತುಂಬಾ ಎತ್ತರದ ಪಾತ್ರಗಳಲ್ಲಿ ಒಂದು ಎನ್ನುವಂತೆ ತೇಜಸ್ವಿ ಲೇಖನಿಯಲ್ಲಿ ಚಿತ್ರಿತವಾಗಿದೆ. ಕೃಷಿಯ ವಿಫಲತೆಯ ಬಗ್ಗೆ, ರೈತರು ಹೊಂದಿರುವ ಮೌಡ್ಯಗಳ ಬಗ್ಗೆ, ಕೃಷಿಗೆ ವೈಜ್ಞಾನಿಕ ಕಾರಣವನ್ನು ಹುಡುಕದೇ ರೈತರು ಹತಾಶರಾಗುತ್ತಿರುವ ಬಗ್ಗೆ ಕರ್ವಾಲೊ ಹಾಗೂ ನಿರೂಪಕ ಪಾತ್ರಗಳ ಸಂಭಾಷಣೆಯಲ್ಲಿ ಸೊಗಸಾಗಿ ಚಿತ್ರಿತವಾಗಿದೆ ಎಂದರು.
ಇಡಿ ಕಾದಂಬರಿಯಲ್ಲಿ ಸಂಶೋಧನೆಯನ್ನು ಮಾಡಿ ಮುಗಿಸುವುದಕ್ಕಿಂತ ಸಂಶೋಧನಾ ಮಾಡುವಾಗಿನ ಬದುಕಿನ ಅನುಭವದ ದರ್ಶನಗಳು ಬಹಳ ಮುಖ್ಯ ಎಂಬುದನ್ನು ಈ ಕಾದಂಬರಿ ನಿರೂಪಿಸುತ್ತದೆ. ತೇಜಸ್ವಿ ಅವರು ಕೃತಿಗಳ ಮೂಲಕ ಹೊಸ ಓದುಗ ಸಮೂಹವನ್ನೆ ಸೃಷ್ಟಿಸಿದ್ದಾರೆ. ಯುವ ಓದುಗರಲ್ಲಿ ಓದಿನ ರುಚಿ ಹತ್ತಿಸುವಲಿ ತೇಜಸ್ವಿ ಕೃತಿಗಳ ಪಾತ್ರ ಅಪಾರ ಎಂದರು.
ಈ ಸಂದರ್ಭದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮದ ಸಂಯೋಜಕ ನಂದೀಶ್ ಬಂಕೇನಹಳ್ಳಿ , ತಾಂತ್ರಿಕ ಸಹಾಯಕ ಪ್ರಜ್ವಲ್ ಇದ್ದರು.

ತೇಜಸ್ವಿ ಪ್ರತಿಷ್ಠಾನದಿಂದ ಚಾರಣ

ಕೊಟ್ಟಿಗೆಹಾರ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಚಾರಣ ಆಯೋಜಿಸಲಾಗಿತ್ತು. ಚಾರ್ಮಾಡಿ ಘಾಟ್ ಅರಣ್ಯದ ಚಾಪ್ರಾಸಿ ಗುಡ್ಡಕ್ಕೆ ಚಾರಣ ಆಯೋಜಿಸಲಾಗಿದ್ದು ಹಾಸನ, ಬೆಂಗಳೂರು, ಮೂಡಿಗೆರೆ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಚಾರಣಿಗರು 16 ಕಿ.ಮಿ ಚಾರಣದಲ್ಲಿ ಭಾಗವಹಿಸಿದರು. ಬೆಳಿಗ್ಗೆ 9-30 ಕ್ಕೆ ಚಾರಣ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ಯಾಗೊಂಡಿತು. ಚಾರಣದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿತ್ತು. ಪ್ಲಾಸ್ಟಿಕ್ ತಟ್ಟೆಗಳ ಬದಲಾಗಿ ಪ್ರತಿಯೊಬ್ಬ ಚಾರಣಿಗರಿಗೆ ಸ್ಟೀಲ್ ಊಟದ ಡಬ್ಬಿಯನ್ನು ನೀಡಲಾಗಿತ್ತು. ಚಾರಣ ಕಾರ್ಯಕ್ರಮದ ಸಂಯೋಜಕ ಬಾಪುದಿನೇಶ್, ಪ್ರತಿಷ್ಠಾನ ಸಮಿತಿ ಸದಸ್ಯರಾದ ಈಶ್ವರ್ ಪ್ರಸಾದ್, ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ತಾಂತ್ರಿಕ ಸಹಾಯಕ ಪ್ರಜ್ವಲ್ ಹಾಗೂ ಚಾರಣಿಗರು ಇದ್ದರು.