ಬೆಂಗಳೂರು : ಪಕ್ಷವನ್ನು ಬಿಡುವ ಪ್ರಶ್ನೆ ಈಗ ಉದ್ಬವಿಸುವುದೇ ಇಲ್ಲ ಎಂದು ವೈ.ಎಸ್.ವಿ. ದತ್ತ ಅವರು ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ವೈ.ಎಸ್.ವಿ ದತ್ತ ಅವರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಈ ಕುರಿತು ಸ್ವತಃ ವೈ.ಎಸ್.ವಿ ದತ್ತ ಅವರೇ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ವೈ.ಎಸ್.ವಿ ದತ್ತ ಅವರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಬಳಿಕ ಕೂಡಲೇ ನಾನು ನನ್ನ ಫೇಸ್‍ಬುಕ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದೇನೆ. ಇದರಿಂದ ಎಲ್ಲರ ಅನುಮಾನಗಳನ್ನು ಪರಿಹರಿಸಿದ್ದೇನೆ ಎಂದು ಭಾವಿಸುತ್ತೇನೆ. ನಾನು 20 ವರ್ಷದ ಹುಡುಗನಾಗಿದ್ದಾಗ ಈ ಜನತಾ ಪರಿವಾರದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಚಳುವಳಿಯ ಮೂಲಕ ಸಾರ್ವಜನಿಕರ ಬದುಕಿಗೆ ಪ್ರವೇಶ ಮಾಡಿದವನು. 47 ವರ್ಷ ಜನತಾ ಪರಿವಾರದಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇನೆ. ಸಾತ್ವಿಕವಾದ ಸಿದ್ದಾಂತ, ಜಾತ್ಯಾತೀತತೆ ಹಾಗೂ ಸಾಮಾಜಿಕ ನ್ಯಾಯ ಈ ಎರಡು ಬಹಳ ಮುಖ್ಯ ಎಂದು ಭಾವಿಸಿರುವವನು.
ಒಂದು ಪ್ರಾದೇಶಿಕ ಪಕ್ಷ ಈ ಒಂದು ತತ್ವದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಾನು ಈ ಜಾತ್ಯಾತೀತ ಜನತಾದಳ ಪಕ್ಷದಲ್ಲಿ ಈಗಲೂ ನಾನು ಕ್ರಿಯಾಶೀಲನಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ನಾನು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಸದಸ್ಯನಾಗಿ ಪಕ್ಷದ ಚಿಹ್ನೆ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ಈಗೆಲ್ಲಾ ಇರಬೇಕಾದರೆ ನಾನು ಬೇರೆ ಪಕ್ಷದತ್ತ ಮುಖ ಮಾಡುವ ಪ್ರಮೇಯವೇ ಇಲ್ಲ. ಹಾಗೇ ನಮ್ಮ ಪಕ್ಷ ತತ್ವ ಸಿದ್ದಾಂತಗಳಿಂದ ದೂರವಾಗುತ್ತಿದೆ ಎಂದಾಗ ನಾನು ನಮ್ಮ ಪಕ್ಷದ ವೇದಿಕೆ ಮೇಲೆ ಚರ್ಚೆ ಮಾಡುತ್ತೇನೆ. ದೇವೇಗೌಡ ಅವರು ಇರುವವರೆಗೂ ನಾನು ಈ ಪಕ್ಷದಲ್ಲಿ ಇದ್ದೇ ಇರುತ್ತೇನೆ ಎಂದು ಅನೇಕ ಬಾರಿ ಹೇಳಿದ್ದೇನೆ. ಹಾಗಾಗಿ ನನ್ನ ಮಾತು ಹಾಗೂ ವಾಕ್ಯ ಸ್ಪಷ್ಟವಾಗಿದೆ ಎಂದು ಭಾವಿಸುತ್ತೇನೆ.
ಇದೇ ವೇಳೆ ಜೆಡಿಎಸ್ ಜೊತೆಗಿನ ಮೈತಿಯಿಂದ ಕಾಂಗ್ರೆಸ್‍ಗೆ ನಷ್ಟವಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ಸಿದ್ದರಾಮಯ್ಯ ಅವರಿಗೆ ಈಗ ಲಾಭ ನಷ್ಟ ಎಂಬುದು ಗೊತ್ತಾಯ್ತಾ? ನಮ್ಮ ಜೊತೆ ಇದ್ದಾಗಿನಿಂದಲೂ ಹಾಗೂ ನಾವು ಸಿದ್ದರಾಮಯ್ಯರವರೊಂದಿಗೆ ಕೆಲಸ ಮಾಡಿದ್ದಾಗಿನಿಂದ ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆಯೇ ಇದೆ. ಎರಡು ರಾಷ್ಟ್ರೀಯ ಪಕ್ಷಗಳು, ಒಂದು ಪ್ರಾದೇಶಿಕ ಪಕ್ಷ. ಈಗ ಹೊಸ ಬದಲಾವಣೆ ಏನೂ ಇಲ್ಲ ಎಂದರು.










