ಬೆಂಗಳೂರು : ಬಿಜೆಪಿ ಸರ್ಕಾರ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡುತ್ತಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಗೌರವಯುತವಾಗಿ ಕರೆದು, ಪ್ರಾಮಾಣಿಕವಾಗಿ ಮಾತುಕತೆ ನಡೆಸಬೇಕಾಗಿರುವ ನರೇಂದ್ರ ಮೋದಿ ಅವರ ಸರ್ಕಾರ ಕಾಟಾಚಾರದ ಮಾತುಕತೆಯ ಮೂಲಕ ತನ್ನ ಸಹಜ ಸ್ವಭಾವವಾದ ಉದ್ದಟತನ ಮತ್ತು ಅಪ್ರಮಾಣಿಕತೆಯನ್ನು ಪ್ರದರ್ಶಿಸಿದೆ.
ಒಂದೆಡೆ ಗಂಭೀರವಾಗಿ ಮಾತುಕತೆಯನ್ನು ನಡೆಸದೆ, ಇನ್ನೊಂದೆಡೆ ರೈತ ಹೋರಾಟಗಾರರನ್ನು ಭಯೋತ್ಪಾದಕರು, ಉಗ್ರಗಾಮಿಗಳು ಎಂದೆಲ್ಲ ದೂಷಿಸುತ್ತಿರುವ ಬಿಜೆಪಿ ಸರ್ಕಾರ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡುತ್ತಿದೆ.
ದಲಿತರ ಪರ, ಮಾನವಹಕ್ಕುಗಳ ಪರವಾಗಿ ಹೋರಾಡುವವರನ್ನು ‘ಅರ್ಬನ್ ನಕ್ಸಲ್’ಗಳೆಂದು, ಕೋಮುವಾದದ ವಿರುದ್ಧ ಹೋರಾಡುವವರನ್ನು ದೇಶದ್ರೋಹಿಗಳೆಂದು ದೂಷಿಸುತ್ತ ಬಂದ ನರೇಂದ್ರ ಮೋದಿ ಅವರ ಸರ್ಕಾರ ಈಗ ಅನ್ನಕೊಡುವ ರೈತರನ್ನು ಉಗ್ರಗಾಮಿಗಳೆನ್ನುವ ನೀಚಮಟ್ಟಕ್ಕೆ ಇಳಿದಿದೆ.
ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದೇವೆ ಎಂದು ಇಲ್ಲಿಯ ವರೆಗೆ ಬಡಾಯಿ ಬಿಡುತ್ತಾ ಬಂದ ಬಿಜೆಪಿ, ಈಗ ದೆಹಲಿಯಲ್ಲಿನ ರೈತ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಕಾಂಗ್ರೆಸ್ ಪಕ್ಷ ರೈತಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ.
ನರೇಂದ್ರ ಮೋದಿ ಅವರ ಸರ್ಕಾರ ರೈತ ಹೋರಾಟಗಾರರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಇಳಿಯದೆ, ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.










