ಮೂಡಿಗೆರೆ : ಮಳೆಯಿಂದ ಬೆಳೆ ಹಾನಿಯಾದ ಸ್ಥಳಕ್ಕೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಭೇಟಿ…

218

ಕೊಟ್ಟಿಗೆಹಾರ : ಅಕಾಲಿಕ ಮಳೆಯಿಂದ ಬೆಳೆಹಾನಿಯಾದ ಮೂಡಿಗೆರೆ ತಾಲ್ಲೂಕಿನ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.
ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ, ಮುಗ್ರಹಳ್ಳಿ, ಬೆಟ್ಟಗೆರೆ, ಫಲ್ಗುಣಿ, ಅತ್ತಿಗೆರೆ ಗ್ರಾಮಗಳಿಗೆ ಬೇಟಿ ನೀಡಿ ಅಕಾಲಿಕ ಮಳೆಯಿಂದ ಹಾನಿಯಾದ ಭತ್ತದ ಗದ್ದೆಗಳು ಹಾಗೂ ಕಾಫಿತೋಟಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಫಿ ಮಂಡಳಿಯಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ಕಾಫಿ ಬೆಳೆಹಾನಿಯ ಸಮೀಕ್ಷೆ ಮಾಡಲು 5 ತಂಡಗಳನ್ನು ರಚಿಸಲಾಗಿದ್ದು ಈಗಾಗಲೇ ಆ ತಂಡಗಳು ಸಮೀಕ್ಷೆಯಲ್ಲಿ ತೊಡಗಿದ್ದಾರೆ. ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಅಡಿಕೆ, ಭತ್ತ ಹಾಗೂ ಇತರೆ ಬೆಳೆಗಳ ಹಾನಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ. ಒಂದು ವಾರದೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು ಬೆಳೆಹಾನಿಯ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಅಕಾಲಿಕ ಮಳೆಯಿಂದ ಕಾಫಿಗಿಡಗಳಲ್ಲಿ ಹೂ ಅರಳಿದೆ. ಕಾಫಿ ಹಣ್ಣುಗಳು ಉದುರಿವೆ. ಅತಿಯಾದ ಮಳೆಯಿಂದ ರಾಶಿ ಕಾಫಿಹಣ್ಣುಗಳು ಬೂಸು ಬಂದಿವೆ. ಕಾರ್ಮಿಕರ ಕೊರತೆಯಿಂದ ಗಿಡದಿಂದ ಉದುರಿದ ಕಾಫಿಯನ್ನು ಹೆಕ್ಕಲು ಕೂಡ ಸಮಸ್ಯೆಯಾಗಿದೆ. ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಅತ್ತಿಗೆರೆಯ ಹಿರಿಯ ಕಾಫಿ ಬೆಳೆಗಾರರಾದ ಎ.ಬಿ ಕೃಷ್ಣೇಗೌಡ ಅವರು ಜಿಲ್ಲಾಧಿಕಾರಿಗಳ ಬಳಿ ಕಾಫಿ ಬೆಳೆ ಹಾನಿಯಾದ ಬಗ್ಗೆ ಅಳಲು ತೋಡಿಕೊಂಡರು. ವರ್ಷದಿಂದ ಕಾಫಿ ತೋಟದಲ್ಲಿ ಶ್ರಮ ವಹಿಸಿ ದುಡಿದಿದ್ದು ವರ್ಷದ ಫಸಲು ಕೈ ಸೇರುವ ಹೊತ್ತಿಗೆ ಅಕಾಲಿಕ ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಕಾಫಿ ಬೆಳೆಗಾರರು ಹಾಗೂ ರೈತರ ನೆರವಿಗೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ತಹಶೀಲ್ದಾರ್ ರಮೇಶ್, ಕೃಷಿ ಇಲಾಖೆಯ ಕೃಷಿ ಅಧಿಕಾರಿ ವೆಂಕಟೇಶ್, ಕಾಫಿಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಶ್ರೀದೇವಿ, ಗ್ರಾಮ ಲೆಕ್ಕಾಧಿಕಾರಿ ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಆನಂದ್, ನಿತ್ಯಾ, ನಮಿತಾ, ರಮ್ಯ, ಉಮೇಶ್, ಗ್ರಾಮ ಸಹಾಯಕ ಅಣ್ಣಪ್ಪ ಇದ್ದರು.