ಚಿಕ್ಕಮಗಳೂರು : ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಭಾರತದಲ್ಲಿ ಹುಟ್ಟದೇ ಇದ್ದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ : ಪ್ರೀತೇಶ್.

158
firstsuddi

ಚಿಕ್ಕಮಗಳೂರು : ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಭಾರತದಲ್ಲಿ ಹುಟ್ಟದೇ ಇದ್ದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ ಎಂದು ವಂದೇ ಮಾತರಂ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಪ್ರೀತೇಶ್ ಹೇಳಿದರು.
ನಗರದ ಭಾರತ ಸೇವಾದಳದ ಜಿಲ್ಲಾ ಕಛೇರಿಯಲ್ಲಿ ವೀರ ಸನ್ಯಾಸಿ ವಿವೇಕಾನಂದರ 158ನೇ ಜನ್ಮ ದಿನದ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ವಿವೇಕಾನಂದರ ಬದುಕು ಮತ್ತು ಬರಹ ಕುರಿತ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರು ಆಧ್ಯಾತ್ಮ ಸಾಧನೆ, ಆಧ್ಯಾತ್ಮ ಪ್ರಚಾರದ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೂ ಮಾರ್ಗದರ್ಶಕರಾಗಿದ್ದರು, ಅದಕ್ಕೆ ಸಾಕ್ಷಿಯಾಗಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರು ಮತ್ತು ದೇಶಭಕ್ತರ ಬಳಿ ಸದಾಕಾಲ ವಿವೇಕಾನಂದರ ಪುಸ್ತಕವಿರುತ್ತಿತ್ತು ಅವರ ಪ್ರೇರಣೆಯಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದರು.
ಸ್ವಾಮಿ ವಿವೇಕಾನಂದರು ದೇಶದಲ್ಲಿ ಹುಟ್ಟದಿದ್ದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ನಮಗೆ ಕಾಣಿಸುತ್ತಿರಲಿಲ್ಲ ಎಂದ ಅವರು ವಿವೇಕಾನಂದರು ಒಬ್ಬ ಅಧ್ಬುತ ಗುರುವಾಗಿದ್ದರು ಹಾಗೂ ಅಧ್ಬುತ ಶಿಷ್ಯರೂ ಆಗಿದ್ದರು ಅದೇ ಅವರ ವಿಶೇಷತೆಯಾಗಿತ್ತು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಇಂದಿನ ಯುವಜನತೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಆ ಮೂಲಕ ರಾಷ್ಟ್ರನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು.
ಇದೇ ವೇಳೆ ಕೊರೋನಾ ಜಾಗೃತಿ ಕುರಿತು ಯುವಜನತೆಗಾಗಿ ವಿಶೇಷ ಶಿಬಿರ ನಡೆಯಿತು. ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ್, ಸದಸ್ಯರಾದ ತಿಮ್ಮೇಗೌಡ, ಶಾಂತಕುಮಾರ್, ತಾಲ್ಲೂಕು ಅಧ್ಯಕ್ಷ ಜಗದೀಶ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶಪ್ಪ, ಚಂದ್ರಶೇಖರ್, ಉಷಾ ಉಪಸ್ಥಿತರಿದ್ದರು.