ಮೂಡಿಗೆರೆ: ಕೊರೋನಾ ಸೋಂಕಿನ ಭೀತಿ, ಅಕಾಲಿಕ ಮಳೆಯ ನಡುವೆಯೂ ಮಕರ ಸಂಕ್ರಮಣವನ್ನು ಮೂಡಿಗೆರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ನಡೆದಿದೆ.
ದಕ್ಷಿಣಾಯಣದಿಂದ ಉತ್ತರಾಯಣ ಪ್ರಾರಂಭವಾಗುವ ಪುಣ್ಯಕಾಲವೇ ಮಕರ ಸಂಕ್ರಾಂತಿ. ಮಹಾಭಾರತದಲ್ಲಿ ಅರ್ಜುನನಿಂದ ಬಾಣಗಳ ದಾಳಿ ಮಾಡಿಸಿಕೊಂಡ ಗುರು ಭೀಷ್ಮ ಮಹೋತ್ತಮರು ಐದುವರೆ ತಿಂಗಳುಗಳ ಕಾಲ ಕಾದು ಸಂಕ್ರಾಂತಿ ದಿನದಂದೇ ತಮ್ಮ ದೇಹ ತೊರೆದ ಕಥೆ ಮಕರ ಸಂಕ್ರಮಣಕ್ಕೆ ವಿಶೇಷ ಅಭಿಮಾನ ದೊರಕಿಸಿಕೊಟ್ಟಿದೆ. ಮಕರ ಸಂಕ್ರಮಣ ರೈತರ ಆದಿಯಾಗಿ ಬಹುತೇಕರಿಗೆ ವಿಶೇಷವಾದ ಹಬ್ಬ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗೆ ಪೂಜೆ ಸಲ್ಲಿಸಿ ಮನೆ ತುಂಬಿಸಿಕೊಳ್ಳುವ ಪರ್ವಕಾಲ. ಹಿಂದೂ ಧರ್ಮದಲ್ಲಿ ಸಂಕ್ರಮಣ ಹಬ್ಬದ ಕಾಲವನ್ನು ಪುಣ್ಯಕಾಲ ಅಥವಾ ಅಭಿವೃದ್ಧಿಯ ಪರ್ವಕಾಲ ಎಂದೂ ಕರೆಯಲಾಗುತ್ತದೆ. ಉತ್ತರಾಯಣದಲ್ಲಿ ನಿಧನ ಹೊಂದುವವರಿಗೆ ಸ್ವರ್ಗದ ಬಾಗಿಲು ತೆರೆದಿರುವುದರ ಜೊತೆಗೆ ಪುನರ್ ಜನ್ಮದಿಂದ ಮುಕ್ತಿ ಪ್ರಾಪ್ತಿಯಾಗುತ್ತದೆ ಎನ್ನುವ ಬಲವಾದ ನಂಬಿಕೆ ಕೂಡ ಇದೆ.
ಇಂಥಹ ವಿಶೇಷವಾದ ಮಕರ ಸಂಕ್ರಾಂತಿ ಹಬ್ಬದ ಆಚರಣೆಯನ್ನು ದಕ್ಷಿಣ ಭಾರತದಲ್ಲಿ ಮಾಡದ ಜನರಿಲ್ಲ ಎಂದೇ ಹೇಳಬಹುದು. ಕೊರೋನಾ ಭೀತಿಯಿಂದ ನಲುಗಿದ್ದ ಮನಸ್ಸಿಗೆ ಮುದ ಪಡೆಯಲೆಂದೋ ಏನೋ ಸಂಕ್ರಮಣ ಹಬ್ಬಕ್ಕೆ ಸೋಮವಾರದಿಂದಲೇ ಸಕಲ ಸಿದ್ಧತೆಗೆ ತಾಲ್ಲೂಕಿನ ಜನ ಸಿದ್ಧತೆ ನಡೆಸಿದ್ದಾರೆ. ದೂರದ ಊರುಗಳಲ್ಲಿ ಇದ್ದ ಮಕ್ಕಳು-ಮೊಮ್ಮಕ್ಕಳು, ಬಂಧುಗಳು ಶನಿವಾರದಿಂದಲೇ ತಮ್ಮ ತಮ್ಮ ಮೂಲ ಮನೆಗೆ ಹಿಂತಿರುಗುತ್ತಿರುವ ದೃಶ್ಯ ಕಂಡುಬರುತ್ತಿತ್ತು. ಮಾರುಕಟ್ಟೆಯಲ್ಲಿ ಎಂದಿನಂತೆ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದ್ದರೂ ಸಹ ಪೂಜಾ ಸಮಾಗ್ರಿ, ಎಳ್ಳು ಬೆಲ್ಲ, ಕಬ್ಬು ಹಾಗೂ ದಿನಸಿ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿತ್ತು. ಇನ್ನು ಕೊರೋನಾ ಭೀತಿ ಹಿನ್ನಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಲ್ಲಿ ವಿಪರೀತ ಇಳಿಕೆಯಾಗಿದ್ದು ಸಂಕ್ರಾಂತಿ ಹಬ್ಬಕ್ಕೆ ಕೊಂಚ ಹಿನ್ನಡೆ ಉಂಟುಮಾಡಿದೆ.
ತಾಲ್ಲೂಕಿನ ಪ್ರಸಿದ್ಧ ಸ್ಥಳವಾದ ದೇವೀರಮ್ಮ ಬನ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ದೇವವೃಂದ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಕ್ರಾಂತಿ ಹಬ್ಬದ ದಿನ ಕೃಷಿಕರು ತಮ್ಮ ಬೆಳೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಮುಂದಿನ ಬಾರಿ ಉತ್ತಮ ಬೆಳೆಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಶುಚಿರ್ಭೂತರಾಗಿ ಮನೆ ಹಾಗೂ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಭಕ್ಷ್ಯ ಬೋಜನಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಸಲ್ಲಿಸಿ ನಂತರ ತಾವೂ ಊಟ ಮಾಡಿ ಮನೆ ಮಂದಿಯೆಲ್ಲಾ ಸಂಭ್ರಮಿಸುತ್ತಾರೆ. ಇನ್ನು ಸಂಜೆಯ ವೇಳೆಗೆ ಮನೆಯ ಮುತ್ತೈದೆಯರು ಹಾಗೂ ಚಿಕ್ಕ ಮಕ್ಕಳು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂದು ಬಂಧುಗಳು ಹಾಗೂ ನೆರೆಹೊರೆಯವರಿಗೆ ಎಳ್ಳು ಬೆಲ್ಲ ತುಂಬಿದ ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಹಂಚಿ ಪರಸ್ಪರ ಶುಭಾಶಯ ಕೋರುತ್ತಾರೆ.
ಆಧುನಿಕ ಜೀವನದ ಭರಾಟೆಯ ನಡುವೆಯೂ ಸನಾತನ ಹಿಂದೂ ಧರ್ಮದ ಹಬ್ಬದ ಮಹತ್ವವನ್ನು ಅರಿಯುತ್ತಿರುವ ಇಂದಿನ ಯುವ ಪೀಳಿಗೆ ಹಬ್ಬಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಹಬ್ಬದ ಆಚರಣೆಗೆ ಮುಂದಾಗಿರುವುದು ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮೆರಗು ನೀಡುತ್ತಿರುವುದಂತೂ ಸತ್ಯ. ತಾಲ್ಲೂಕಿನ ಜನತೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿ.ಪ.ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವೆ ಮೋಟಮ್ಮ, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
ಸಂಕ್ರಮಣದ ದಿನ ವಿಶೇಷ ಸ್ನಾನ : ತಾಲ್ಲೂಕಿನಲ್ಲಿ ಸಂಕ್ರಮಣದ ಅಂಗವಾಗಿ ಕುಟುಂಬದವರು ಎಳ್ಳು, ಅರಿಶಿನ ಹಾಗೂ ಎಣ್ಣೆಯ ಮಿಶ್ರಣವನ್ನು ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುತ್ತಾರೆ. ಬಯಲು ಸೀಮೆಗಳಂತೆ ಮಲೆನಾಡಿನಲ್ಲಿಯೂ ಸಹ ಸಂಕ್ರಮಣ ಅಭ್ಯಂಜನಕ್ಕೆ ವಿಶೇಷ ಸ್ಥಾನಮಾನವಿದ್ದು, ಬಹುತೇಕರು ಆಚರಣೆ ಮಾಡುತ್ತಾರೆ. ಮಕ್ಕಳು ಹಾಗೂ ವಯಸ್ಕರಿಗೆ ಈ ಸ್ನಾನದಿಂದ ಆಗುವ ಮಾನಸಿಕ ಹಾಗೂ ದೈಹಿಕ ಪ್ರಯೋಜನಗಳನ್ನು ಅರಿತಿರುವ ಯುವ ಸಮಾಜ ಪುರಾತನ ಸಂಸ್ಕøತಿಗೆ ಪುನಃಜಾರಿಕೊಳ್ಳುತ್ತಿರುವುದು ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ.










