ಬೆಂಗಳೂರು : ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಖಾತೆ ಹ್ಯಾಕ್ ಮಾಡಿದ ಮೂವರು ಖದೀಮರು ಅರೆಸ್ಟ್!

150
Firstsuddi

ಬೆಂಗಳೂರು : ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಖಾತೆ ಹ್ಯಾಕ್ ಮಾಡಿದ ನಾಗಾಲ್ಯಾಂಡ್ ಮೂಲದ ಮೂವರು ಸೈಬರ್ ಖದೀಮರನ್ನು ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಥಿಯಾ ಅಲಿಯಾಸ್ ರುಬಿಕಾ(31), ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಎಂದು ಗುರುತಿಸಲಾಗಿದೆ.

ಕಳೆದ ಫೆ.26ರಂದು ಶಂಕರ್ ಬಿದರಿಯವರ ಇ – ಮೇಲ್ ಖಾತೆ ಹ್ಯಾಕ್ ಮಾಡಿ ಸ್ನೇಹಿತರಿಗೆ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದರು. ಈ ಸಂಬಂಧ ಶಂಕರ್ ಬಿದರಿ ಅವರು ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಆಗ್ನೇಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 13 ಪ್ಯಾನ್ ಕಾರ್ಡ್, ಆರು ಆಧಾರ್ ಕಾರ್ಡ್, ಎರಡು ಎಟಿಎಂ, ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ 2 ಲಕ್ಷದಷ್ಟು ಹಣವನ್ನೂ ಜಪ್ತಿ ಮಾಡಲಾಗಿದೆ.

ಪ್ರಮುಖ ಆರೋಪಿಯಾದ ರೂಬಿಕಾ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಆನ್ ಲೈನ್ ಮೂಲಕ ಪೀಟರ್ ಹಾಗೂ ಜೇಮ್ಸ್ ಎನ್ನುವವರ ಪರಿಚಯ ಮಾಡಿಕೊಂಡು ಅವರ ಸಹಾಯದೊಂದಿಗೆ ಅಕೌಂಟ್ ಹ್ಯಾಕ್ ಮಾಡಿ ಹಣ ಗಳಿಸುತ್ತಿದ್ದಳು ಎನ್ನುವುದು ತನಿಖೆಯಿಂದ ತಿಳಿಬಂದಿದೆ.