ಚಿಕ್ಕಮಗಳೂರು : ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 187ನೇ ಜನ್ಮ ದಿನಾಚರಣೆ ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಇಂದು ವೈಭವದಿಂದ ನಡೆಯಿತು.
ಜನ್ಮ ದಿನದ ಪ್ರಯುಕ್ತ ಬೆಳಿಗ್ಗೆ ಶ್ರೀ ಮಠದಲ್ಲಿ ಭಗವಾನರಿಗೆ ಮಂಗಳಾರತಿ, ಉಷಾ ಕೀರ್ತನೆ, ವಿಶೇಷ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ, ಭಕ್ತರಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ನಾಮ ಸಂಕೀರ್ತನೆ ನಡೆದವು.
ಶ್ರೀ ಪ್ರವ್ರಾಜಿಕ ಅಜಿತಪ್ರಾಣಾ ಮಾತಾಜಿ ಅವರ ನೇತೃತ್ವದಲ್ಲಿ ಶ್ರೀ ರಾಮಕೃಷ್ಣ ಮೂಲಮಂತ್ರ ಹೋಮ, ಶಾರದಾ ಮೂಲ ಮಂತ್ರ ಹೋಮ, ವಿವೇಕಾನಂದ ಮೂಲ ಮಂತ್ರ ಹೋಮ ಜರುಗಿತು. ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು, ಶ್ರೀ ರಾಮಕೃಷ್ಣ ಪರಮಹಂಸರ ಗ್ರಂಥವಾಚನ ಮಾಡಲಾಯಿತು.
ಇದೇ ವೇಳೆ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕ ಶುಭವ್ರತ ಪ್ರಾಣಾ ಮಾತಾಜಿ, ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಅತ್ಯಂತ ದಯಾಳು, ಭಕ್ತರ ಮೇಲೆ ಅವರಿಗೆ ಅಪಾರವಾದ ಕರುಣೆ, ಅನುಕಂಪ ಮತ್ತು ಪ್ರೀತಿ ಇತ್ತು, ಸದಾ ಕಾಲ ಅವರು ಭಕ್ತರ ಉದ್ದಾರಕ್ಕಾಗಿ ಹಾತೊರೆಯುತ್ತಿದ್ದರು ಎಂದು ಹೇಳಿದರು.
ಶ್ರೀ ರಾಮಕೃಷ್ಣ ಪರಮಹಂಸರ ಬದುಕು ಮತ್ತು ಸಂದೇಶಗಳ ಕುರಿತು ಪ್ರವಚನ ನೀಡಿದ ಶ್ರೀ ಪ್ರವ್ರಾಜಿಕ ಗೋಪೇಶ ಪ್ರಾಣಾ ಮಾತಾಜಿ ಭಗವಾನರು ಕಾಳಿ ಮಾತೆಯನ್ನು ಸಾಕ್ಷಾತ್ಕಾರ ಮಾಡಿಕೊಂಡವರು, ಅವರು ಕೇವಲ ಸದ್ಬಕ್ತರನ್ನಷ್ಟೇ ಉದ್ದಾರ ಮಾಡಲಿಲ್ಲ ದೀನರು, ದುರುಳರು, ದುಷ್ಟರು ಮತ್ತು ಸಮಾಜಕ್ಕೆ ಬೇಡವಾಗಿದ್ದವರನ್ನು ಕರುಣೆಯಿಂದ ಉದ್ದರಿಸಿದ ಮಹಾತ್ಮರು ಎಂದು ತಿಳಿಸಿದರು.
ಶ್ರೀ ಮಠದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಮತ್ತು ಸಂದೇಶಗಳನ್ನು ಸಾರುವ ಗ್ರಂಥ ಮತ್ತು ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಜನ್ಮದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಬೆಳಗಿನಿಂದ ಸಂಜೆಯವರೆಗೆ ಶ್ರೀ ಮಠಕ್ಕೆ ತೆರಳಿ ಪೂಜೆ ಪ್ರಾರ್ಥನೆ ಸಲ್ಲಿಸಿದರು.










