ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ!

113
Firstsuddi

ಮೈಸೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅತ್ಯಾಚಾರಿಗಳಿಗೆ, 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಒಂದನೇ ಶೀಘ್ರಗತಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.

ನದೀಂ ಪಾಷಾ, ಸದ್ದಾಂ ಹುಸೇನ್, ಹಾಗೂ ತನ್ವೀರ್ ಪಾಷಾ ಶಿಕ್ಷೆಗೆ ಒಳಗಾದ ಆರೋಪಿಗಳು. 2016ರ ಜನವರಿ 14ರಂದು ಜ್ಯೂಸ್ ಕೊಡಿಸುವುದಾಗಿ ಅಪ್ರಾಪ್ತೆಯನ್ನು ಢಾಬಾಗೆ ಕರೆದುಕೊಂಡು ಹೋಗಿ ಜ್ಯೂಸ್ ಕುಡಿಸಿ, ಗೋಬಿ ತಿನ್ನಿಸಿ ನಂತರ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಬಳಿಕ ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಅಪ್ರಾಪ್ತೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು. ಆದರೆ, ಇದಕ್ಕೆ ಹೆದರದೇ ಪೋಷಕರು, ಉದಯಗಿರಿ ಠಾಣೆಯಲ್ಲಿ ಪೋಕ್ಸೋ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದರು.

2016 ರಲ್ಲಿ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಂತ್ರಸ್ತೆ ಪರ ಸರ್ಕಾರಿ ಅಭಿಯೋಜಕರಾದ ಮಂಜುಳಾ ವಾದ ಮಂಡಿಸಿದ್ದರು. ಉದಯಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಅವರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಿದ್ದರು.ಅಂತಿಮವಾಗಿ ಬಾಲಕಿಗೆ ನ್ಯಾಯ ಸಿಕ್ಕಿದ್ದು, ಅಪ್ರಾಪ್ತ ಬಾಲಕಿಗೆ 7 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ತೀರ್ಪು ನೀಡಿದ್ದಾರೆ.