ಚಿಕ್ಕಮಗಳೂರು : ಕರ್ನಾಟಕ ಜಾನಪದ ಪರಿಷತ್ತಿನಿಂದ ಅಜ್ಜಂಪುರದಲ್ಲಿ ಏ.7 ರಂದು ತಾಲ್ಲೂಕು ಮಟ್ಟದ ಪ್ರಥಮ ಜಾನಪದ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರತಿಮಾ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಅಜ್ಜಂಪುರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿ ಆ ನಿಟ್ಟಿನಲ್ಲಿ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಗಾರುಡಿ ಗೊಂಬೆ, ವೀರಗಾಸೆ, ಡೊಳ್ಳು ಕುಣಿತ, ಪಟ ಕುಣಿತ, ನಂದಿ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವೈಭವದಿಂದ ನಡೆಸಲು ತೀರ್ಮಾನಿಸಲಾಯಿತು.
ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿಕಲಾ ರಮೇಶ್ ತಾಲ್ಲೂಕಿನ ಪ್ರಮುಖ ಜನಪ್ರತಿನಿಧಿಗಳನ್ನು ಜಾನಪದ ಸಾಹಿತಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸುವುದರ ಜೊತೆಗೆ ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲು ತಾಲ್ಲೂಕಿನ ಎಲ್ಲಾ ಭಜನಾ ತಂಡಗಳು ಮತ್ತು ಜಾನಪದ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಣಯಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಕಾರ್ಯಕ್ರಮಗಳಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಿದ್ದು ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ, ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಗ್ರಾಮದ ಮುಖಂಡರಾದ ಸಂದೀಪ್, ಕಾರೇಹಳ್ಳಿ ಬಸವರಾಜಪ್ಪ, ರಾಜೇಶ್ವರಿ ಸಭೆಯಲ್ಲಿ ಪಾಲ್ಗೊಂಡಿದ್ದರು.










