ಚಿಕ್ಕಮಗಳೂರು : ವಿದ್ಯಾರ್ಥಿಗಳು ಓದಿನ ಜೊತೆಗೆ ಕುತೂಹಲ, ಆಸಕ್ತಿ, ಹವ್ಯಾಸ ಮತ್ತು ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು : ಗಿರಿಜಾಶಂಕರ್.

248
firstsuddi

ಚಿಕ್ಕಮಗಳೂರು : ವಿದ್ಯಾರ್ಥಿಗಳು ಓದಿನ ಜೊತೆಗೆ ಕುತೂಹಲ, ಹವ್ಯಾಸ, ಆಸಕ್ತಿ ಮತ್ತು ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕುವೆಂಪು ಭಾಷಾ ಭಾರತಿ ಸದಸ್ಯ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಸಲಹೆ ಮಾಡಿದರು.

ಕರ್ನಾಟಕ ಲಲಿತಾ ಕಲಾ ಅಕಾಡೆಮಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ದೃಶ್ಯ ಕಲಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಬರೀ ರ್ಯಾಂಕ್ ಗಳಿಕೆಗಷ್ಟೇ ಸೀಮಿತವಾದರೆ ಅವರು ಸರ್ವತೋಮುಖವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ, ಅವರನ್ನು ಪುಸ್ತಕದ ಹುಳು ಎನ್ನಲಾಗುತ್ತದೆ. ಆದರೆ ಓದಿನ ಜೊತೆಗೆ ಕುತೂಹಲ, ಆಸಕ್ತಿ, ಹವ್ಯಾಸ ಮತ್ತು ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಅವರಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರಬಂದು ಅವರು ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ಚಿತ್ರಕಲೆ ರಸಗ್ರಹಣ ಶಿಬಿರಗಳು ಮಹಾನಗರಗಳಿಗಷ್ಟೇ ಕೇಂದ್ರೀಕೃತವಾಗಬಾರದು, ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ನಡೆಯಬೇಕು. ಹಳ್ಳಿಗಳಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ, ಅವರನ್ನು ಗುರುತಿಸಿ ಪ್ರೋತ್ಸಾಹಿಸುವವರಿಲ್ಲದೇ ಅವರ ಪ್ರತಿಭೆ ಕಮರಿ ಹೋಗುತ್ತಿದೆ. ರಸಗ್ರಹಣ ಶಿಬಿರಗಳು ಹಳ್ಳಿಗಳಲ್ಲೂ ನಡೆದರೆ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಚಿತ್ರಕಲೆಯನ್ನು ಬರೀ ನೋಡಿದರಷ್ಟೇ ಸಾಲದು ಅದರ ಒಳಹೊಕ್ಕು ಅದರ ಹಿಂದಿರುವ ಭಾವನೆಗಳನ್ನು, ಸಂದೇಶಗಳನ್ನು ಅರಿಯಬೇಕು, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅದರ ಆಳಕ್ಕಿಳಿದರೆ ಅವು ನಮ್ಮೊಂದಿಗೆ ಮಾತನಾಡುತ್ತವೆ ಎಂದು ತಿಳಿಸಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯೆ ಲಕ್ಷ್ಮೀ ಮೈಸೂರು ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಯುವ ಕಲಾವಿದ ಎಸ್.ಆರ್.ರವಿಶಂಕರ್ ಚಿತ್ರ ಬಿಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪ್ರಾತ್ಯಕ್ಷಿಕೆ ನೀಡಿದರು. ಕಲಾವಿದ ಹರ್ಷಕಾವ ಚಿತ್ರ ರಚಿಸುವ ಕುರಿತು ತರಬೇತಿ ನೀಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಸಿ.ರಮೇಶ್, ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್, ಪ್ರಾಂಶುಪಾಲ ರಾಘವೇಂದ್ರ, ಕಲಾವಿದರಾದ ಸುರೇಶ್ಚಂದ್ರ ದತ್ತ, ಸುಜಾತ, ಉಪಸ್ಥಿತರಿದ್ದರು.