ಮೂಡಿಗೆರೆ :ವಿಚಾರಣೆಗೆ ಕರೆತಂದು ಬೇರೆ ಆರೋಪಿಯ ಮೂತ್ರ ಕುಡಿಸಿದ ಪಿ.ಎಸ್.ಐ…? ಪಿ.ಎಸ್.ಐ ವಿರುದ್ಧ ಎಫ್.ಐ.ಆರ್.

1062

ಚಿಕ್ಕಮಗಳೂರು:ವಿಚಾರಣೆಗೆ ಕರೆತಂದು ಆರೋಪಿಗೆ ಠಾಣೆಯಲ್ಲೇ ಬೇರೊಬ್ಬನ  ಮೂತ್ರ ಕುಡಿಸಿದ್ದ ಆರೋಪದಡಿ ಪಿ.ಎಸ್.ಐ. ವಿರುದ್ಧ ಎಫ್.ಐ.ಆರ್. ದಾಖಲಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನ್ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಗೋಣಿಬೀಡು ಠಾಣಾ ವ್ಯಾಪ್ತಿಯ ಕಿರಗುಂದ ಗ್ರಾಮದ ಪುನೀತ್ ಎಂಬ ಯುವಕನನ್ನ ವಿವಾಹಿತ ಮಹಿಳೆ ಜೊತೆ ಮಾತನಾಡುತ್ತಿದ್ದ, ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ವಿವಾಹಿತ ಮಹಿಳೆಯ ಪತಿಯ ದೂರಿನ ಅನ್ವಯ ವಿಚಾರಣೆಗೆ ಕರೆತಂದಿದ್ದರು. ಈ ವೇಳೆ, ಪಿ.ಎಸ್.ಐ. ಅರ್ಜುನ್ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಠಾಣೆಯಲ್ಲಿ ಪಿ.ಎಸ್.ಐ. ನನ್ನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದರು. ನನಗೆ ತುಂಬಾ ದಣಿವಾಗಿತ್ತು. ಆಗ ನಾನು ನೀರು ಕೇಳಿದ್ದಕ್ಕೆ ಪಿ.ಎಸ್.ಐ. ಅರ್ಜುನ್, ಕಳ್ಳತನ ಆರೋಪದಡಿ ಠಾಣೆಗೆ ಕರೆತಂದಿದ್ದ ಬೇರೊಬ್ಬ ಆರೋಪಿ ಚೇತನ್ ಎಂಬ ಯುವಕನಿಂದ ನನ್ನ ಬಾಯಿಗೆ ಮೂತ್ರ ಮಾಡಿಸಿ ಯಾರಿಗಾದರೂ ಹೇಳಿದರೆ ಚೆನ್ನಾಗಿರೋಲ್ಲ ಎಂದು ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದರು ಎಂದಿದ್ದಾನೆ. ಠಾಣೆಯಲ್ಲಿ ಪೊಲೀಸರು ನನ್ನನ್ನ ತುಂಬಾ ವಿಚಿತ್ರವಾಗಿ ಬಳಸಿಕೊಂಡರು. ಲಾಕ್‍ಡೌನ್ ಇದ್ದ ಕಾರಣ ನಮ್ಮ ಮನೆಯವರು ಯಾರೂ ಬರಲು ಆಗಲಿಲ್ಲ. ಹೀಗೆ ಮಾಡಿದರೆ ನಿನ್ನನ್ನ ಬಿಡುತ್ತೇನೆ ಎಂದರು. ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನ ನಾಲಿಗೆಯಲ್ಲಿ ನೆಕ್ಕಿಸಿದರು. ಅವರು ಹೇಳಿದ ಎಲ್ಲಾ ಕೆಲಸ ಮಾಡಿದರೂ ನನ್ನನ್ನ ಮನೆಗೆ ಬಿಡಲಿಲ್ಲ. ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಮನೆಯವರು ಕೂಲಿಗೆ ಹೋಗಿದ್ದರು. ಯಾರೂ ಬರಲಿಲ್ಲ. ರಾತ್ರಿ 10 ಗಂಟೆಗೆ ನನ್ನ ಮಾವ ಬಂದು ಕರೆದುಕೊಂಡು ಹೋದರು. ನನ್ನ ಮೇಲೆ ಈವರೆಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆ ಮಹಿಳೆ ಕೂಡ ನನ್ನ ವಿರುದ್ಧ ದೂರು ನೀಡಿಲ್ಲ. ಸಬ್ ಇನ್ಸ್‍ಪೆಕ್ಟರ್ ಯಾರೋ ಒಂದು ಗುಂಪಿನ ಮಾತು ಕೇಳಿ ಈ ರೀತಿ ವರ್ತಿಸಿದ್ದಾರೆ ಎಂದು ಯುವಕ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾನೆ. ಕೈಕಾಲು ಕಟ್ಟಿ ಅಂಗೈ ಹಾಗೂ ಮುಂಗಾಲಿಗೆ ಹೊಡೆದಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಪೊಲೀಸರ ವರ್ತನೆಯಿಂದ ಮನನೊಂದು ಯುವಕ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪಿ.ಎಸ್.ಐ. ವಿರುದ್ಧ ಕ್ರಮಕ್ಕೆ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದ. ಈ ಹಿನ್ನೆಲೆ ಪಿ.ಎಸ್.ಐ. ಅರ್ಜುನ್‍ರನ್ನ ವರ್ಗಾವಣೆ ಮಾಡಿರೋ ಎಸ್ಪಿ ಅಕ್ಷಯ್ ಡಿವೈಎಸ್ಪಿ ಪ್ರಭು ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಗೋಣಿಬೀಡು ಠಾಣೆಯಲ್ಲಿ ಪಿ.ಎಸ್.ಐ. ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 342/323/504/506/330/348ರ ಅಡಿ ಪ್ರಕರಣ ದಾಖಲಾಗಿದೆ.