ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ ಹಾವಳಿ ಜೋರಾಗಿದ್ದು, ಇದುವರೆಗೆ ಬ್ಲ್ಯಾಕ್ ಫಂಗಸ್ ನಿಂದ 51 ಮಂದಿ ಸಾವನ್ನಪ್ಪಿದ್ದಾರೆ. ಬ್ಲ್ಯಾಕ್ ಫಂಗಸ್ ಮಾತ್ರವಲ್ಲದೇ ದೇಶದಲ್ಲಿ ವೈಟ್ ಫಂಗಸ್, ಯೆಲ್ಲೋ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಒಟ್ಟು 1,370 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 27 ಮಂದಿ ಮಾತ್ರ ಗುಣಮುಖರಾಗಿದ್ದು,1292 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ.
ಕರ್ನಾಟಕ ಕಿವಿ, ಮೂಗು ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆದಿದ್ದ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪುರ ಗ್ರಾಮದ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖರಾದ ಒಂದು ತಿಂಗಳ ಬಳಿಕ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಪ್ರತಿದಿನ ಮಾಸ್ಕ್ ಧರಿಸಿ ಗಾಯವಾಗಿರುವ ಪರಿಣಾಮ, ಅವರ ಕಿವಿ ಭಾಗದಲ್ಲಿ ಬ್ಲಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಆ ವ್ಯಕ್ತಿ ಹೆಚ್ಚು ಸ್ಟಿರಾಯ್ಡ್ ಬಳಸಿರುವುದರಿಂದ ಬ್ಲಾಕ್ ಫಂಗಸ್ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.










