ಬೆಂಗಳೂರು : ಕೆಎಸ್ ಆರ್ ಟಿಸಿ ಹೆಸರು ಈಗ ಕೇರಳದ ಪಾಲಾಗಿದೆ. ಕರ್ನಾಟಕದಲ್ಲಿ ಈ ಹೆಸರು ಬಳಸುವಂತಿಲ್ಲ ಎಂದು ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಆದೇಶ ಹೊರಡಿಸಿದೆ.
ಹಲವಾರು ವರ್ಷಗಳಿಂದ ಎರಡೂ ರಾಜ್ಯಗಳು ಕೆಎಸ್ ಆರ್ ಟಿಸಿ ಹೆಸರನ್ನು ಬಳಸುತ್ತಿವೆ. ಆದರೆ 2014 ರಲ್ಲಿ ಕರ್ನಾಟಕವು ಕೆಎಸ್ ಆರ್ ಟಿಸಿ ಹೆಸರು ಕ ರ್ನಾಟಕಕ್ಕೆ ಸೇರಿದ್ದು, ಅದನ್ನು ಕೇರಳ ಸಾರಿಗೆಯಿಂದ ಬಳಸಬಾರದು ಎಂದು ನೋಟಿಸ್ ನೀಡಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇರಳ ಸಾರಿಗೆ ಇಲಾಖೆ, 1953 ರಿಂದಲೂ ‘ಕೆಎಸ್ ಆರ್ ಟಿಸಿ’ ಮೊನೊಗ್ರಾಮ್ ನೊಂದಿಗೆ ಬಳಸುತ್ತಿದ್ದೇವೆ ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಲ್ಲಿ ಆಕ್ಷೇಪಣೆ ಸಲ್ಲಿಸಿತ್ತು. ನಂತರ ಹಲವಾರು ವರ್ಷಗಳ ಕಾನೂನು ಹೋರಾಟಗಳು ನಡೆದವು. ಅಂತಿಮವಾಗಿ, ಟ್ರೇಡ್ಮಾರ್ಕ್ ಗಳ ಕಾಯ್ದೆ 1999 ರ ಅಡಿಯಲ್ಲಿ ಕೆಎಸ್ ಆರ್ ಟಿಸಿ ಹೆಸರು ಮತ್ತು ಎರಡು ಆನೆಯ ಸಂಕೇತ, ಆನವಂಡಿ ಹೆಸರಿನ ಕಾಪಿರೈಟ್ ಅನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಂಜೂರು ಮಾಡಿದೆ. ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಮಂಜೂರು ಮಾಡಿರುವುದಾಗಿ ಕೇರಳ ಸರ್ಕಾರದ ಸಾರಿಗೆ ಇಲಾಖೆ ನಿನ್ನೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
1948ರಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ(ಎಂಜಿಆರ್ ಟಿಡಿ) ಎಂದು ಕರೆಯಲಾಗಿತ್ತು. ಆದರೆ 1973ರ ನಂತರ ಮೈಸೂರು ಕರ್ನಾಟಕ ಅಂತ ನಾಮಕರಣವಾದ ಮೇಲೆ ಕೆಎಸ್ ಆರ್ ಟಿಸಿ ಪದ ಬಳಸಲು ಆರಂಭಿಸಿತ್ತು. ಕೇರಳದಲ್ಲೂ ಕೆಎಸ್ ಆರ್ ಟಿಸಿಗೂ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ(ಟಿಎಸ್ ಟಿಡಿ) ಎಂದು ಕರೆಯಾಗುತ್ತಿತ್ತು. ಬಳಿಕ 1965 ರಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆಗಿತ್ತು.
ಟ್ರೇಡ್ ರಿಜಿಸ್ಟ್ರಿ ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿ ಕೇರಳದ ಪರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾರಿಗೆ ಇಲಾಖೆ ಇನ್ಮುಂದೆ ಕೆಎಸ್ ಆರ್ ಟಿಸಿ ಎಂದು ಬಳಸಬೇಡಿ ಎಂದು ರಾಜ್ಯ ಸಾರಿಗೆ ಇಲಾಖೆಗೆ ನೋಟಿಸ್ ನೀಡಲು ನಿರ್ಧಾರ ಮಾಡಿದೆ.










