ಮುಂಬೈ : ಕಟ್ಟಡ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಗರದ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ನಡೆದಿದೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಟ್ಟಡ ಕುಸಿತದಿಂದ ಹತ್ತಿರದ ಮನೆಗಳು ಅಪಾಯಕ್ಕೆ ಸಿಲುಕಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15 ಜನರನ್ನು ರಕ್ಷಿಸಲಾಗಿದೆ ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮತ್ತಷ್ಟು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನೂ ಸ್ಥಳಕ್ಕೆ ಧಾವಿಸಿರುವ ಸಚಿವ ಅಸ್ಲಾಮ್ ಶೇಖ್ ಅವರು ಮಳೆಯಿಂದಾಗಿ ಕಟ್ಟಡ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡ ಜನರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.










