ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ಇಂದು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್ ಮೇಲ್ ಆರೋಪ ಪ್ರಕರಣದಲ್ಲಿ ಅವರು ತನಿಖೆಗೆ ಹಾಜರಾಗಿದ್ದಾರೆ. ಬ್ಲ್ಯಾಕ್ ಮೇಲ್ ಆರೋಪ ಪ್ರಕರಣದಲ್ಲಿ ಇಬ್ಬರಿಗೂ ಬೆಂಗಳೂರಿನ 91ನೇ ಸಿಸಿಹೆಚ್ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಆರೋಪಿಗಳು 5 ದಿನಗಳ ಒಳಗೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.
ಇದೀಗ ನ್ಯಾಯಾಲಯ ಆದೇಶ ನೀಡಿದ 5ನೇ ದಿನ, ಆರೋಪಿಗಳು ವಿಚಾರಣೆ ಎದುರಿಸಲು ಆಡುಗೋಡಿ ಟೆಕ್ನಿಕಲ್ ಸೆಲ್ ಗೆ ಆಗಮಿಸಿದ್ದಾರೆ. ಆರೋಪಿಗಳು ಎಸ್ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ವಕೀಲರೊಂದಿಗೆ ಹಾಜರಾಗಿದ್ದಾರೆ.
ಸುಮಾರು 64 ಕ್ಕೂ ಅಧಿಕ ಪ್ರಶ್ನೆಗಳನ್ನು ಎಸ್ಐಟಿ ರೆಡಿ ಮಾಡಿಟ್ಟುಕೊಂಡಿರುವ ಮಾಹಿತಿಯಿದ್ದು, ಆರೋಪಿಗಳು ದಿನಪೂರ್ತಿ ವಿಚಾರಣೆ ಎದುರಿಸುವ ಸಾಧ್ಯೆತೆಯಿದೆ ಎನ್ನಲಾಗಿದೆ.
ಇನ್ನೂ ನೀರೀಕ್ಷಣಾ ಜಾಮೀನು ಪಡೆದು ವಿಚಾರಣೆಗೆ ಹಾಜರಾದರೂ ಆರೋಪಿಗಳಿಗೆ ಆತಂಕ ಎದುರಾಗಿದೆ. ಯಾಕೆಂದರೆ ಕೋರ್ಟ್ ನೀಡಿದ ಆದೇಶ ಪ್ರತಿಯಲ್ಲಿ ತನಿಖಾ ತಂಡಕ್ಕೆ ಆರೋಪಿಗಳನ್ನು ಬಂಧಿಸಲು ಅವಕಾಶ ನೀಡಲಾಗಿದೆ. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿರುವ ಆರೋಪಿಗಳಿಬ್ಬರನ್ನು ಎಸ್ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆಯುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.










