ಶಿವಮೊಗ್ಗ : ಯಡಿಯೂರಪ್ಪ ನಾಯಕತ್ವಕ್ಕೆ ಅಡ್ಡಿಪಡಿಸಿದರೆ, ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ ಎಂದು ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಭೇಟಿ ಕೊಟ್ಟ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಕೇಳಿ ಬರುತ್ತಿದೆ. ಈ ನಾಯಕತ್ವ ಬದಲಾವಣೆ ವಿಚಾರ ಕೊರೊನಾಗಿಂತ ಅಪಾಯಕಾರಿ. ಯಡಿಯೂರಪ್ಪ ಸಿಎಂ ಆಗುತ್ತಲೇ ಪ್ರವಾಹ ಬಂತು. ಈ ಪ್ರವಾಹವನ್ನು ಒಬ್ಬರೇ ಎದುರಿಸಿದರು. ಪ್ರವಾಹ ಮುಗಿಯಿತು ಎನ್ನುವಷ್ಟರಲ್ಲಿ ಕೊರೊನಾ ಎದುರಾಗಿದೆ. ಕೋವಿಡ್ ಮಹಾಮಾರಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಇದರಿಂದ ಈ ಸಂದರ್ಭದಲ್ಲಿ ಯಾರು ಸಹ ನಾಯಕತ್ವದ ಬಗ್ಗೆ ಮಾತನಾಡಬಾರದು. ಅವರ ನಾಯಕತ್ವಕ್ಕೆ ಯಾವುದೇ ಅಡೆತಡೆಗಳನ್ನು ತರಬಾರದು ಎಂದರು.










