ಇಂದಿನಿಂದ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮೆಟ್ರೋ ರೈಲು ಸಂಚಾರ…

108
firstsuddi

ಬೆಂಗಳೂರು : ಇಂದಿನಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಮೆಟ್ರೋ ಸಂಚಾರ ಮಾಡಲಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮೆಟ್ರೊ ರೈಲು ಸೇವೆ ಇರಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ ಸಿಎಲ್) ತಿಳಿಸಿದೆ.

ಜನದಟ್ಟಣೆಯ ಸಂದರ್ಭದಲ್ಲಿ ಪ್ರತಿ ಐದು ನಿಮಿಷ ಹಾಗೂ ಜನದಟ್ಟಣೆ ಇಲ್ಲದಾಗ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಆದರೆ, ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ. ವೀಕೆಂಡ್ ಕರ್ಫ್ಯೂ ಇರುವ ಶನಿವಾರ ಮತ್ತು ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ.

ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ ಗಳನ್ನು ನಿಗಮದ ವೆಬ್ ಸೈಟ್, ಆಪ್ ಬಳಸಿ ರಿಚಾರ್ಜ್ ಮಾಡಿ ಕೊಳ್ಳಬಹುದು. ಅಲ್ಲದೆ, ಮೆಟ್ರೊ ನಿಲ್ದಾಣಗಳಲ್ಲಿನ ಕೌಂಟರ್ ಗಳಲ್ಲಿಯೂ ಎಟಿಎಂ ಕಾರ್ಡ್ ಅಥವಾ ನಗದು ಬಳಸಿ ಖರೀದಿ ಅಥವಾ ರಿಚಾರ್ಜ್ ಮಾಡಿಸಬಹುದು.ಜೊತೆಗೆ ಸ್ಮಾರ್ಟ್ ಕಾರ್ಡ್ ಜೊತೆ ಟೋಕನ್ ಪಡೆದು ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಲಾಕ್ ಡೌನ್ ಸಡಿಲಿಕೆ ನಂತರ, ಬೆಳಿಗ್ಗೆ 7 ರಿಂದ 11ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ರಿಂದ 6 ರವರೆಗೆ, ಅಂದರೆ ದಿನದಲ್ಲಿ 7 ಗಂಟೆ ಮಾತ್ರ ಮೆಟ್ರೊ ರೈಲು ಸಂಚರಿಸುತ್ತಿದ್ದವು. ಇಂದಿನಿಂದ ದಿನದಲ್ಲಿ 11 ಗಂಟೆ ಮೆಟ್ರೋ ಸೇವೆ ಲಭ್ಯವಾಗಲಿದೆ.