ಬೆಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಂಬಂಧ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಸಂಭವನೀಯ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದು, ಈವರೆಗೆ 148 ಪ್ರಕರಣ ಕಂಡುಬಂದಿದೆ. ಪರೀಕ್ಷೆ ಕಡಿಮೆ ಮಾಡುವುದು ಬೇಡ ಎಂದು ಸೂಚಿಸಲಾಗಿದೆ. ಹಲವು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಅವರಲ್ಲಿ ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮೂತ್ರಪಿಂಡದ ಸಮಸ್ಯೆ, ಅಪೌಷ್ಠಿಕತೆ ಕಂಡುಬಂದಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇನ್ನು ಒಂದೇ ವಾರದಲ್ಲಿ ‘ಆರೋಗ್ಯ ನಂದನ’ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದು, ರಾಜ್ಯದ ಒಂದೂವರೆ ಕೋಟಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿದ್ದು, ಅವರ ಆರೋಗ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು. ಈಗಾಗಲೇ 29 ವೈದ್ಯರನ್ನು ಜಿಲ್ಲೆಗೆ ನೀಡಲಾಗಿದೆ. ಆದ್ದರಿಂದ ಯಾವುದೇ ವೈದ್ಯರ ಕೊರತೆ ಇಲ್ಲ ಎಂದರು.
ಹಬ್ಬ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು. ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಎಚ್ಚರವಾಗಿರಬೇಕು. ಶಾಲೆ ಆರಂಭ ವಿಚಾರವಾಗಿ ಮಾತನಾಡಿದ ಸಚಿವರು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಅವರ ಭವಿಷ್ಯ ರೂಪಿಸುವುದು ಸರ್ಕಾರದ ಮುಂದಿರುವ ಜವಬ್ದಾರಿ. ಈಗಾಗಲೇ ಅನೇಕ ರಾಜ್ಯಗಳು ಶಾಲೆಗಳನ್ನು ಪ್ರಾರಂಭ ಮಾಡಿವೆ. ನಾವು ಪ್ರಾಯೋಗಿಕ ಶಾಲೆಗಳನ್ನು ಓಪನ್ ಮಾಡಬೇಕಿದೆ. ಶಾಲೆಗಳಲ್ಲಿ ಶೇಕಡಾ ಎರಡಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಬಂದರೆ ಅಂತಹ ಶಾಲೆಗಳನ್ನು ಮುಚ್ಚಲಾಗುವುದು ಎಂದರು.










