ಬೆಂಗಳೂರು : ಕೊರೊನಾ 3ನೇ ಅಲೆ ಆತಂಕದ ನಡುವೆ ಇಂದು ದ್ವಿತೀಯ ಪಿಯುಸಿ ಪರೀಕ್ಚೆ ಆರಂಭವಾಗುತ್ತಿದೆ. ಖಾಸಗಿ ಅಭ್ಯರ್ಥಿಗಳು ಮತ್ತು ಸರ್ಕಾರ ಕೊಟ್ಟ ಫಲಿತಾಂಶವನ್ನು ರಿಜೆಕ್ಟ್ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದು, ಕೊರೊನಾ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ.
ದ್ವಿತಿಯ ಪಿಯುಸಿ ಪರೀಕ್ಷೆ ಫಲಿತಾಂಶ ರಿಜೆಕ್ಟ್ ಮಾಡಿದ್ದ 945 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ಸಾವಿರದ 414 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 18,414 ವಿದ್ಯಾರ್ಥಿಗಳ ಪೈಕಿ 17,469 ಖಾಸಗಿ ಕಾಲೇಜು ವಿದ್ಯಾರ್ಥಿಗಳಿದ್ದರೆ, 352 ಪುನರಾವರ್ತಿತ, 593 ಫ್ರೆಶರ್ಸ್ ಪರೀಕ್ಷೆ ಬರೆಯಲಿದ್ದಾರೆ. ಇಂದು ಸಾಮಾನ್ಯ ಗಣಿತ, ಐಚ್ಛಿಕ ಕನ್ನಡ, ಗಣಿತ ವಿಷಯಕ್ಕೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರ ವರೆಗೆ ಪರೀಕ್ಷೆ ನಡೆಯಲಿದ್ದು, ಸೆಪ್ಟೆಂಬರ್ 3ರ ವರೆಗೆ ಪರೀಕ್ಷೆ ನಡೆಯಲಿದೆ.
ರಾಜ್ಯದ 187 ಪರೀಕ್ಷಾ ಕೇಂದ್ರದಲ್ಲಿ ಎಕ್ಸಾಂ ನಡೆಯುತ್ತವೆ. ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ಇದ್ದು, ಪರೀಕ್ಷಾ ಕೊಠಡಿಯಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಿಎಂಟಿಸಿ, ಕೆಎಸ್ಆರ್ಟಿಸಿ ಮೂಲಕ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ.










