ಬೆಂಗಳೂರು : ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ಮಾರ್ಗ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಿದ್ದು, ಆ.29ರಂದು ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ನಮ್ಮ ಮೆಟ್ರೋ ವಿಸ್ತರಿತ ಮಾರ್ಗವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಆಗಸ್ಟ್ 11 ಹಾಗೂ 12 ರಂದು ಮೈಸೂರು ರಸ್ತೆ ಟು ಕೆಂಗೇರಿವರೆಗೆ ನಮ್ಮ ಮೆಟ್ರೋ ಮಾರ್ಗದ ಸುರಕ್ಷತಾ ತಪಾಸಣೆಯನ್ನು ಪರಿಶೀಲನೆ ನಡೆಸಿದ್ದು, ಕಳೆದ ಮೂರು ತಿಂಗಳಿನಿಂದ ಈ ಮಾರ್ಗದಲ್ಲಿ ಟ್ರಯಲ್ ರನ್ ನಡೆಸಲಾಗಿದೆ. ಒಟ್ಟು 7.5 ಕಿಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮಾರ್ಗ ಇದಾಗಿದ್ದು, 1,560 ಕೋಟಿ ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣಗೊಂಡಿದೆ.
ನಾಯಂಡಳ್ಳಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಹಾಗೂ ಕೆಂಗೇರಿ ನಿಲ್ದಾಣಗಳಿವೆ. ಇದರಲ್ಲಿ ನಾಯಂಡಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಹೊರತುಪಡಿಸಿ ಉಳಿದ ಎಲ್ಲಾ ನಿಲ್ದಾಣಗಳನ್ನು ರಸ್ತೆದಾಟಲು ಪಾದಚಾರಿ ಮಾರ್ಗ ಕಲ್ಪಿಸಲಾಗಿದೆ.










