ಮಂಗಳೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಆರೀಫ್ ಪಾಷಾ (30) ಎಂದು ಗುರುತಿಸಲಾಗಿದೆ. ಮೂಲತಃ ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿಯಾದ ಆತ ನಗರದ ಕಲ್ಕಟ್ಟದಲ್ಲಿ ವಾಸಿಸುತ್ತಿದ್ದ. ಈತ ಕೂಲಿ ಕಾರ್ಮಿಕನಾಗಿದ್ದು, ಬಾಲಕಿ ತಂದೆಗೆ ಪರಿಚಿತನಾಗಿದ್ದ ಎನ್ನಲಾಗಿದೆ.
ಆರೋಪಿ ಬಾಲಕಿಯನ್ನು ತಿಂಡಿ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಅದೇ ಸಂದರ್ಭ ಆ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬೈಕ್ ನಿಲ್ಲಿಸಿದ್ದಾರೆ. ಕಾಪಾಡಿ ಕಾಪಾಡಿ ಅನ್ನುತ್ತಿದ್ದ ಬಾಲಕಿಯನ್ನು ಗಮನಿಸಿ ಏನಾಯಿತೆಂದು ಪ್ರಶ್ನಿಸಿದಾಗ ಪುಟ್ಟ ಬಾಲಕಿ ನಡೆದ ಕೃತ್ಯವನ್ನು ವಿವರಿಸಿದ್ದಾಳೆ.
ಬಾಲಕಿ ವಿಷಯ ತಿಳಿಸುತ್ತಿದ್ದಂತೆ ಸ್ಥಳೀಯರಿಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ ಅಲ್ಲಿದ್ದವರ ಸಹಕಾರದೊಂದಿಗೆ ಆರೋಪಿ ಆರೀಫ್ ಪಾಷಾನನ್ನು ತಕ್ಷಣ ಹಿಡಿದಿದ್ದು, ನಂತರ ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸದ್ಯ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.










