ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ – ಫ್ಲೈಓವರ್ ಮೇಲಿಂದ ಬಿದ್ದು ಯುವಕ-ಯುವತಿ ಸಾವು…

92
firstsuddi

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಬೈಕ್ ಗೆ ಬಲೆನೋ ಕಾರು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕಾರ್ ಗುದ್ದಿದ ರಭಸಕ್ಕೆ ಬುಲೆಟ್ ಬೈಕ್ ನಲ್ಲಿದ್ದ ಯುವಕ, ಯುವತಿ ಇಬ್ಬರು ಸುಮಾರು 20 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ತಮಿಳುನಾಡಿನ ಚೆನ್ನೈ ಮೂಲದ ಯುವಕ ಪ್ರೀತಮ್(30) ಹಾಗೂ ಕೃತಿಕಾ(28) ಎಂದು ಗುರುತಿಸಲಾಗಿದ್ದು, ಇಬ್ಬರೂ ಟೆಕ್ಕಿ ಆಗಿದ್ದಾರೆ.

ಕಳೆದ ರಾತ್ರಿ ಸುಮಾರು 9:20ರ ಸಮಯದಲ್ಲಿ ಎಲಿವೆಟೆಡ್ ಫ್ಲೈ ಓವರ್ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ಮಾರ್ಗದಲ್ಲಿ ಕಾರ್ ನಂ. ಕೆಎ-01 ಎಂಆರ್-2802ರ ಚಾಲಕ ನಿತೇಶ್ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು, ಮುಂದೆ ಹೋಗುತ್ತಿದ್ದ ಬುಲೆಟ್ ಬೈಕ್ ನಂ. ಟಿಎನ್-01-ಬಿಡಿ-9218 ಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯುವಕ ಯುವತಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿ ಕಾರು ಚಾಲಕ ನಿತೇಶ್ ಗೆ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಿತೇಶ್ ವಿರುದ್ಧ 279, 304(ಎ) ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.