ಮಂಗಳೂರು : ಮೂಡಬಿದ್ರೆ ಬೆಳುವಾಯಿ ಗ್ರಾಮದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾಂತ ಇದೀಗ ಪತ್ನಿಗೆ ವಂಚಿಸಿ ಮತ್ತೊಂದು ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಬಸವೇಶ್ವರ ಬಡವಾಣೆಯ ಅಂದ್ರಳ್ಳಿ ನಿವಾಸಿ ರಾಘವೇಂದ್ರ ಕುಲಕರ್ಣಿ ಎಂಬಾತ 2017 ರ ಜೂನ್ 18 ರಂದು ಮೂಡಬಿದ್ರೆಯ ಮಹಿಳೆಯನ್ನು ಬೆಂಗಳೂರಿನ ಲಗ್ಗೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೂಡ ಪಡೆದಿದ್ದ.
ಮದುವೆಯಾದ ಬಳಿಕ ರಾಘವೇಂದ್ರ ಕುಲಕರ್ಣಿ ಪತ್ನಿಗೆ ಆಗಾಗ ದೈಹಿಕ ಹಿಂಸೆ ನೀಡುತ್ತಿದ್ದ , ಗರ್ಭಿಣಿಯಾದ ಸಂದರ್ಭದಲ್ಲಿ ಪತ್ನಿ ತವರಿಗೆ ತೆರಳಿದ್ದರು. ಈ ವೇಳೆ ಮಗು ಜನಿಸಿದೆ. ಮರಳಿ ತವರು ಮನೆಯಿಂದ ಪತ್ನಿ, ಮಗುವನ್ನು ಕರೆದುಕೊಂಡು ಬರಲು ಆತ ಹೋಗಲೇ ಇಲ್ಲ. ಪತಿಗಾಗಿ ಕಾದು ಕೊನೆಗೆ ಇಬ್ಬರೂ ಬೆಂಗಳೂರಿನಲ್ಲಿರುವ ಪತಿ ರಾಘವೇಂದ್ರನ ಮನೆಗೆ ಬಂದಿದ್ದರು.
ಆದರೆ ಪತಿ ರಾಘವೇಂದ್ರ ಮತ್ತೆ ಆಕೆಯನ್ನು ತವರು ಮನೆಗೆ ಬಿಟ್ಟುಬಂದಿದ್ದಾನೆ. ಇತ್ತೀಚೆಗೆ ಆತ ಕರೆಗಳನ್ನು ಸ್ವೀಕರಿಸದೇ ಇರುವುದನ್ನು ಕಂಡು ಬೆಂಗಳೂರಿಗೆ ತೆರಳಿ ವಿಚಾರಿಸಿದಾಗ ಆತ ಇನ್ನೊಂದು ವಿವಾಹವಾಗಿರುವುದು ಗೊತ್ತಾಗಿದೆ. ಇಷ್ಟು ಮಾತ್ರವಲ್ಲದೆ ಈ ಮೊದಲು ಕೂಡ ಈತ ಮದುವೆಯಾಗಿ ಪತ್ನಿಗೆ ವಿಚ್ಛೇದನ ನೀಡಿದ್ದ , ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ತನ್ನನ್ನು ಮದುವೆಯಾಗಿರುವುದಾಗಿ ಮೂಡಬಿದ್ರೆಯ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಕುಲಕರ್ಣಿ , ಆತನ ಸಹೋದರ ನರಹರಿ , ಆತನ ಮಾವ ನರಸಿಂಹ , ಅತ್ತೆ ಗೀತಾ , ಸಹೋದರಿಯರಾದ ಪ್ರೇಮಲಾ , ಸವಿತಾ ರಂಗನಾಥ್ , ಹಾಗೂ ಬಾವ ನಾಗನಾಥ ಅವರ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳಾ ಠಾಣಾ ಇನ್ಸ್ ಪೆಕ್ಟರ್ ರೇವತಿ ಅವರು ಹಾಗೂ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಅವರ ತಂಡ ಬೆಂಗಳೂರಿಗೆ ತೆರಳಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ನರಹರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.










