ಬೆಂಗಳೂರು : ಭಾರತದ ಆಧುನಿಕ ಮಹಿಳೆಯರು ಮದುವೆಯಾಗದೆ ಏಕಾಂಗಿಯಾಗಿರಲು ಬಯಸುತ್ತಾರೆ. ಒಂದುವೇಳೆ ಮದುವೆಯಾದರೂ ಮಕ್ಕಳನ್ನು ಹೆರಲು ಬಯಸುವುದಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ.
ನಿನ್ನೆ ನಿಮ್ಹಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ಭಾರತದ ಅನೇಕ ಆಧುನಿಕ ಮಹಿಳೆಯರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ಅವರಿಗೆ ಮದುವೆಯೇ ಬೇಕಾಗಿಲ್ಲ. ಒಂದು ವೇಳೆ ಅವರು ಮದುವೆಯಾದರೂ ಮಗುವನ್ನು ಹೆರಲು ಸಿದ್ಧರಿರುವುದಿಲ್ಲ. ತಾವು ಗರ್ಭಿಣಿಯಾಗುವ ಬದಲು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಬಯಸುತ್ತಾರೆ. ವರ್ಷಗಳು ಕಳೆದಂತೆ ನಮ್ಮ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೆ, ಈ ರೀತಿಯ ಬದಲಾವಣೆ ಒಳ್ಳೆಯದಲ್ಲ. ಈ ವಿಷಯವನ್ನು ಹೇಳುವುದಕ್ಕೆ ನನಗೆ ಬಹಳ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.
ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ನಮಗೆ ಮುತ್ತಾತ-ಮುತ್ತಜ್ಜಿ ಇರುವುದು ಬಿಡಿ, ನಾವು ನಮ್ಮ ಹೆತ್ತವರು ನಮ್ಮ ಜೊತೆಗೆ ಇರಲು ಬಯಸಲ್ಲ. ಇದರಿಂದ ಸಂಬಂಧಗಳು ಹಾಳಾಗುತ್ತಿವೆ. ಕೂಡು ಕುಟುಂಬವಾಗಿ ಬದುಕುತ್ತಿದ್ದವರು ಈಗ ಪ್ರತ್ಯೇಕವಾಗಿರುವುದರಲ್ಲೇ ಖುಷಿ ಕಾಣುತ್ತಿದ್ದಾರೆ ಎಂದು ಡಾ. ಸುಧಾಕರ್ ಹೇಳಿದ್ದಾರೆ. ಸದ್ಯ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.










