ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಖ್ಯಾತ ವಕೀಲ ರಾಜೇಶ್ ಭಟ್ ಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಓರ್ವನನ್ನು ಮಹಿಳಾ ಠಾಣೆಯ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ನಗರದ ಬೋಂದೆಲ್ ನಿವಾಸಿ ಕೆ. ಅನಂತ ಭಟ್ (48) ಬಂಧಿತ. ಪ್ರಮುಖ ಆರೋಪಿ ರಾಜೇಶ್ ಭಟ್ ನೊಂದಿಗೆ ಅನಂತ ಭಟ್ ಅವರು ನಿರಂತರ ಸಂಪರ್ಕದಲ್ಲಿದ್ದರು. ಆರೋಪಿ ರಾಜೇಶ್ ಭಟ್ ನನ್ನು ಪೊಲೀಸರ ಬಂಧನಕ್ಕೆ ಸಿಗದಂತೆ ಸಹಕರಿಸಿದ್ದು, ಪ್ರಕರಣ ವರದಿಯಾದ ಕೂಡಲೇ ರಾಜೇಶ್ ಭಟ್ ನನ್ನು ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ತಲೆಮರೆಸಿಕೊಳ್ಳಲು ಸಹಕರಿಸಿದ್ದಾರೆ. ಅಲ್ಲದೇ ಆರೋಪಿ ರಾಜೇಶ್ ಭಟ್ ನ ಕಾರು ಮತ್ತು ಆತ ಬಳಸುತ್ತಿದ್ದ ಮೊಬೈಲ್ ಫೋನನ್ನು ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರಿಗೆ ಸಿಗದಂತೆ ಸಹಕರಿಸಿದ್ದ. ಈ ಹಿನ್ನಲೆ ಅನಂತ್ ಭಟ್ ನನ್ನು ಬಂಧಿಸಲಾಗಿದೆ. ಅಲ್ಲದೆ ರಾಜೇಶ್ ಭಟ್ ಬಳಸುತ್ತಿದ್ದ ಕಾರು ಮತ್ತು ಮೊಬೈಲ್ ಫೋನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೂ ಇಂಟರ್ನ್ಶಿಪ್ ಮಾಡಲು ಬಂದಿದ್ದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಖ್ಯಾತ ವಕೀಲ ರಾಜೇಶ್ ಭಟ್ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.










