ಬೆಳಗಾವಿ : ಪೊಲೀಸ್ ಕಾನ್ಸ್ಟೇಬಲ್ ನೇಮಕ ಪರೀಕ್ಷೆಯಲ್ಲಿ ವಿದ್ಯುನ್ಮಾನ ತಂತ್ರಜ್ಞಾನ ಬಳಸಿ ನಕಲು ಮಾಡುವುದು ಪತ್ತೆಯಾಗಿತ್ತು. ಇದೀಗ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ಬೆಳಗಾವಿ ನಗರದ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದೆ.
ಅಕ್ಟೋಬರ್ 24ರಂದು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ವೇಳೆ 12 ಜನ ಪರೀಕ್ಷಾರ್ಥಿಗಳು ಬ್ಲ್ಯೂಟೂತ್ ಬಳಸಿ ನಕಲಿಗೆ ಯತ್ನಿಸಲಾಗಿತ್ತು. ಈ ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿ ಪ್ರಶ್ನೆ ಪತ್ರಿಕೆ ಮಾಹಿತಿಯನ್ನು ತಮ್ಮ ತಂಡಕ್ಕೆ ರವಾನೆ ಮಾಡಿದ್ದು, ಅವರಿಂದ ಉತ್ತರ ಪಡೆದುಕೊಂಡು ಬರೆಯುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ರಾಮತೀರ್ಥ ನಗರದಲ್ಲಿ ದಾಳಿ ನಡೆಸಿದ್ದ ಬೆಳಗಾವಿ ಪೊಲೀಸರು 12 ಜನರನ್ನು ಬಂಧಿಸಿದ್ದರು. ಬಂಧಿತರಿಂದ 33 ಮೊಬೈಲ್ ಫೋನ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲ್ಯೂಟೂತ್, 3 ಟ್ಯಾಬ್ ಹಾಗು ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿತ್ತು.
ಅಲ್ಲದೇ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೈವಾಡ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.










