ಚಿಕ್ಕಬಳ್ಳಾಪುರದಲ್ಲಿ ಭೂ ಕಂಪನದ ಅನುಭವ – ಭೀತಿಯಲ್ಲಿ ಜನರು…

48
firstsuddi

ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನಿನ್ನೆ ರಾತ್ರಿ 8.50ರ ಸಮಯದಲ್ಲಿ ಭೂಮಿಯಿಂದ ಭಾರಿ ಶಬ್ದ ಬಂದಿದೆ. ಮನೆಯಲ್ಲಿದ್ದ ಪಾತ್ರೆಗಳು, ದೇವರ ಪೋಟೊಗಳು ನೆಲಕ್ಕೆ ಉರುಳಿ ಬಿದ್ದಿವೆ. ಇದರಿಂದ ಭಯ ಭೀತರಾದ ಗ್ರಾಮಸ್ಥರು ಮನೆಯಿಂದ ಆಚೆ ಓಡಿ ಬಂದಿದ್ದಾರೆ.

ಮಿಟ್ಟಹಳ್ಳಿ, ನಂದನವನ, ಅಪ್ಪಸಾನಹಳ್ಳಿ, ಆಗ್ರಹಾರಹಳ್ಳಿ, ಗೋನೇನಹಳ್ಳಿ, ವೆಂಕಟರೆಡ್ಡಿಪಾಳ್ಯ, ಕೊಮ್ಮೇಪಲ್ಲಿ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ರಾತ್ರಿ 8.50ರ ಸಮಯದಲ್ಲಿ 5 ನಿಮಿಷದ ಅಂತರದಲ್ಲಿ ಮೂರು ಭಾರಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ಗ್ರಾಮಸ್ಥರು ಮತ್ತೆ ಮನೆಯ ಒಳಗೆ ಹೋಗಲು ಆತಂಕ ವ್ಯಕ್ತಪಡಿಸಿದರು. ಕೊರೆಯುವ ಚಳಿ ಗಾಳಿಯ ಮಧ್ಯದಲ್ಲಿ ಕೆಲವರು ಮನೆಯಿಂದ ಆಚೆಯೆ ಇದ್ದು, ಜಾಗರಣೆ ಮಾಡಬೇಕಾಯಿತು.

ಭೂಮಿ ಕಂಪಿಸಿರುವ ಮಾಹಿತಿ ಪರಿಶೀಲಿಸಲು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಮಿಟ್ಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಸ್ಥಳಿಯರಿಂದ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಕೆಲ ಮನೆಗಳು ಬಿರುಕು ಸಹ ಬಿಟ್ಟಿವೆ. ಈಗಲೂ ಗ್ರಾಮದ ಜನರಲ್ಲಿ ಭೀತಿ ಮುಂದುವರೆದಿದೆ.