ನವದೆಹಲಿ: ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಸಂಪೂರ್ಣ ಲಾಕ್‍ಡೌನ್‍ಗೆ ಸಿದ್ಧವಿರುವುದಾಗಿ ದೆಹಲಿ ಸರ್ಕಾರ ಸುಪ್ರಿಂಕೋರ್ಟ್‍ಗೆ ತಿಳಿಸಿದೆ.
ದೆಹಲಿ ಚಿಕ್ಕದಾಗಿರುವುದರಿಂದ ಲಾಕ್‍ಡೌನ್, ವಾಯು ಗುಣಮಟ್ಟದ ಮೇಲೆ ಸೀಮಿತ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರವು ಇಡೀ ಎನ್‍ಸಿಆರ್ ಪ್ರದೇಶದಲ್ಲಿ ಲಾಕ್ ಡೌನ್ ಮಾಡಿದರೆ ನಾವು ದೆಹಲಿಯನ್ನು ಲಾಕ್ಡೌನ್ ಮಾಡಲು ಸಿದ್ಧವಿರುವುದಾಗಿ ಕೇಜ್ರಿವಾಲ್ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ.
ದೆಹಲಿಯ ವಾಯುಮಾಲಿನ್ಯದ ಕುರಿತು ಶನಿವಾರ ತುರ್ತು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಗತ್ಯವಿದ್ದರೆ ದೆಹಲಿಯಲ್ಲಿ 2 ದಿನಗಳ ಲಾಕ್‍ಡೌನ್ ಮಾಡಿ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲೇ ಇಂದು ದೆಹಲಿ ಸರ್ಕಾರ ಲಾಕ್‍ಡೌನ್‍ಗೆ ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ.
ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಶಾಲೆಗಳನ್ನು ಸೋಮವಾರದಿಂದ ಒಂದು ವಾರದವರೆಗೆ ಮುಚ್ಚಲಾಗುವುದು ಎಂದು ಘೋಷಿಸಿದ್ದರು. ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಸಚಿವಾಲಯದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು. ಹಾಗೇ, ಇಂದಿನಿಂದ ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಳನ್ನು ಮನೆಯಿಂದಲೇ ಮಾಡಲು ಕೇಜ್ರಿವಾಲ್ ಸೂಚಿಸಿದ್ದರು.










