ಜೈಪುರ : ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ತಂದೆ ಮಗನ ಕೈ, ಕಾಲುಗಳನ್ನು ಕಟ್ಟಿ ಫ್ಯಾನ್ಗೆ ತಲೆಕೆಳಗಾಗಿ ನೇತು ಹಾಕಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ಉದಯ್ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕ ಫ್ಯಾನ್ಗೆ ನೇತಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
8 ವರ್ಷದ ಮಗ ಹೋಂ ವರ್ಕ್ ಮಾಡಿರಲಿಲ್ಲ. ಈ ವಿಚಾರವಾಗಿ ಕೋಪಗೊಂಡ ತಂದೆ ಮಗನನ್ನು ಕಟ್ಟಿ, ತಲೆಕೆಳಗಾಗಿ ನೇತು ಹಾಕಿದಲ್ಲದೆ ಆತನಿಗೆ ಹೊಡೆಯಲು ಹೋಗಿದ್ದ. ಈ ದೃಶ್ಯವನ್ನು ವೀಡಿಯೋ ಮಾಡಿಕೊಂಡ ಆ ಬಾಲಕನ ತಾಯಿ ಬಳಿಕ ಗಂಡನನ್ನು ತಡೆದಿದ್ದಾಳೆ. ಬೇಕಾದರೆ ನನ್ನನ್ನು ಇಲ್ಲೇ ಸಾಯಿಸಿಬಿಡಿ, ಆದರೆ ನನ್ನ ಮಗನನ್ನು ಹೀಗೆಲ್ಲ ನೇತು ಹಾಕಬೇಡ ಎಂದು ಆ ಬಾಲಕ ಅಪ್ಪನ ಬಳಿ ಜೋರಾಗಿ ಅಳುತ್ತಾ ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಬಾಲಕನ ತಂದೆ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಪದೇ ಪದೆ ಮಗನನ್ನು ಹೊಡೆದು, ಹಿಂಸೆ ನೀಡುತ್ತಿದ್ದ. ಆದರೆ, ಈ ಘಟನೆಯ ಬಗ್ಗೆ ಮನೆಯವರಾರೂ ಆತನ ವಿರುದ್ಧ ದೂರು ನೀಡಿಲ್ಲ. ವಿಡಿಯೋ ಆಧಾರದಲ್ಲಿ ಪೊಲೀಸರೇ ಕೇಸ್ ದಾಖಲಿಸಿಕೊಂಡಿದ್ದಾರೆ.










