ಶಿವಮೊಗ್ಗ : ಜಿಲ್ಲೆಯ ಭದ್ರಾವತಿಯ ನಿರ್ಮಲಾ ನರ್ಸಿಂಗ್ ಕಾಲೇಜಿನಲ್ಲಿ 24 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕಾಲೇಜು ಮತ್ತು ನರ್ಸಿಂಗ್ ಹೋಂ ಅನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ಪರೀಕ್ಷೆ ಬರೆಯಲು ಬಂದಿದ್ದರು ಎನ್ನಲಾಗಿದ್ದು, ಪರೀಕ್ಷೆ ಮುಗಿಸಿ ವಾಪಸ್ ಆದವರಲ್ಲಿ ಸಣ್ಣ ಮಟ್ಟಿನ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ. ನರ್ಸಿಂಗ್ ಹೋಂ ಜೊತೆಗೇ ಕಾಲೇಜು ಇರುವುದರಿಂದ ನರ್ಸಿಂಗ್ ಹೋಂ ಅನ್ನು ಸಹ ಸೀಲ್ಡೌನ್ ಮಾಡಲಾಗಿದೆ.
ಕಾಲೇಜು ಹಾಗೂ ನರ್ಸಿಂಗ್ ಹೋಂನ ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.










