ವಿಧಾನ ಪರಿಷತ್ ಚುನಾವಣೆ – 25 ಸ್ಥಾನಗಳಿಗೆ ಇಂದು ಮತದಾನ…

72
firstsuddi

ಬೆಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 8ರಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆವರೆಗೂ ನಡೆಯಲಿದೆ.

25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿರುವ ಏಕೈಕ ಮಹಿಳೆಯಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ 6 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ದಕ್ಷಿಣ ಕನ್ನಡ, ಧಾರವಾಡ, ವಿಜಯಪುರ, ಬೆಳಗಾವಿ, ಬಳ್ಳಾರಿ, ಮೈಸೂರಿನ ತಲಾ 2 ಕ್ಷೇತ್ರ, ಚಿಕ್ಕಮಗಳೂರು, ಕಲಬುರಗಿ, ಉತ್ತರ ಕನ್ನಡ, ಬೀದರ್, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಕೋಲಾರ, ತುಮಕೂರು ಸೇರಿದಂತೆ ಒಟ್ಟು 20 ಕ್ಷೇತ್ರಗಳಲ್ಲಿ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ.

25 ಕ್ಷೇತ್ರಗಳ ಚುನಾವಣೆಗೆ 6,073 ಮತಗಟ್ಟೆಗಳನ್ನು ತೆರೆಯಲಾಗಿದೆ. ಪುರುಷರು 47,368 ಹಾಗೂ 51,474 ಮಹಿಳೆಯರು ಮತ್ತು ಇತರ 3 ಮಂದಿ ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಡಿಸೆಂಬರ್ 14ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.