ಚಿಕ್ಕಮಗಳೂರು : ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈಗಿನಿಂದಲೇ ಗಿಡಮರಗಳನ್ನು ನೆಟ್ಟು ಬೆಳೆಸಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಸಲಹೆ ಮಾಡಿದರು.
ನಗರ ಹೊರವಲಯದ ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಿರು ಉದ್ಯಾನವನ ನಿರ್ಮಾಣಕ್ಕೆ ಇಂದು ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನೀಕರಣದ ಭರದಲ್ಲಿ ಗಿಡಮರ ಮತ್ತು ದಟ್ಟ ಕಾಡುಗಳನ್ನು ಕಡಿದು ನಾಶ ಮಾಡಿದ ಪರಿಣಾಮ ಇಂದು ಅತಿವೃಷ್ಠಿ, ಅನಾವೃಷ್ಠಿ, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ, ಹಸಿರು ಪರಿಸರದ ಕೊರತೆಯಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿದ್ದು, ಉಸಿರಾಡಲು ಶುದ್ದ ಆಮ್ಲಜನಕ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನತೆ ಈ ಸತ್ಯವನ್ನು ಅರಿತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು, ಗಿಡ,ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ಪರಿಸರವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯಲ್ಲಿ ಕಳೆದ 3 ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು. ರಂಗ ಮಂದಿರ ನಿರ್ಮಾಣ ಸೇರಿದಂತೆ ಶಾಲೆ ಅಭಿವೃದ್ದಿ ಹೊಂದಿರುವುದನ್ನು ಶ್ಲಾಘಿಸಿದರು.
ಮುಖ್ಯ ಶಿಕ್ಷಕ ಎ.ಈ.ಅಶೋಕ್ ಮಾತನಾಡಿ ಶಾಲೆಯ ಅಭಿವೃದ್ದಿಗೆ ಮತ್ತು ಉದ್ಯಾನವನ ನಿರ್ಮಾಣಕ್ಕೆ ಸಹಕರಿಸಿದ ಶಾಲಾಭಿವೃದ್ದಿ ಸಮಿತಿ. ಗ್ರಾಮಸ್ಥರು ಮತ್ತು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಿರು ಉದ್ಯಾನವನ ನಿರ್ಮಾಣದ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಹೂ ಗಿಡಗಳನ್ನು ನೆಡಲಾಯಿತು.
ಜಿಲ್ಲಾ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ತಾಲ್ಲೂಕು ಅಧ್ಯಕ್ಷ ಕಿರಣ್ ಕುಮಾರ್, ಶಿಕ್ಷಕರಾದ ಗೀತಾ, ವಾಣೇಶ್ವರಿ, ಸುಧಾ, ವಿಲ್ಮಾ ಗೊನ್ಸಾಲಿಸ್ ಉಪಸ್ಥಿತರಿದ್ದರು.










