ಬಹುಮತದೊಂದಿಗೆ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗುವ ವಿಶ್ವಾಸವಿದೆ – ಕೋಟ ಶ್ರೀನಿವಾಸ ಪೂಜಾರಿ.

56
firstsuddi

ಕುಂದಾಪುರ : ರಾಜ್ಯ ವಿಧಾನ ಪರಿಷತ್ ಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ ಹಾಗೂ ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಚುನಾವಣೆ ದಿನವಾದ ಇಂದು ಜಿಲ್ಲೆಯ ವಿವಿಧ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕಾರ್ಯಕರ್ತರು, ಪಕ್ಷವನ್ನು ಬೆಂಬಲಿಸುವ ಪಕ್ಷೇತರರು, ಇತರ ಪಕ್ಷದ ಸದಸ್ಯರ ಕೂಡ ಬೆಂಬಲಿಸುವ ನಿರೀಕ್ಷೆಯಿದ್ದು ಬಹುಮತದೊಂದಿಗೆ ಆಯ್ಕೆಯಾಗುವ ವಿಶ್ವಾಸವಿದೆ. ಬಿಜೆಪಿಗೆ 3500 ಕ್ಕೂ ಅಧಿಕ ಮತವಿದ್ದು ಎಲ್ಲಾ ಮತ ನಮಗೆ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಪಂಚಾಯತ್ ದಿನಾಚರಣೆಯನ್ನು ಆಚರಿಸುವ ಚಿಂತನೆಯಿದ್ದರೂ ಕೂಡ ಕೋವಿಡ್ ಕಾರಣಕ್ಕಾಗಿ ಎರಡು ವರ್ಷದಿಂದ ಆಗಿರಲಿಲ್ಲ. ಆದರೆ ಪಂಚಾಯತ್ ಸಬಲೀಕರಣಕ್ಕಾಗಿ ಗ್ರಾ.ಪಂ ಸದಸ್ಯರ ಗೌರವ, ಗೌರವ ಧನವನ್ನು ಹೆಚ್ಚಿಸಲು, ಗ್ರಾಮಪಂಚಾಯತ್ ಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಬೇಕಾದ ಕ್ರಮಕೈಗೊಳ್ಳಲಾಗುತ್ತದೆ. ಜನನ ಮರಣ ದೃಢೀಕರಣ ಪತ್ರ, ಸಂಧ್ಯಾಸುರಕ್ಷಾ, ಮನಸ್ವಿನಿ, ಅಂಗವಿಕಲ, ವೃದ್ಧಾಫ್ಯ ವೇತನ ಮೊದಲಾದವುಗಳನ್ನು ಗ್ರಾಮಪಂಚಾಯತಿಯಲ್ಲೇ ಮಾಡಲು ವ್ಯವಸ್ಥೆ ಅನುಷ್ಟಾನಗೊಳಸಲು ಸಾಧಕ ಬಾಧಕ ಪರಾಮರ್ಷಿಸಿ ಸರಕಾರದ ಗಮನಕ್ಕೆ ತರುವ ಅನಿವಾರ್ಯತೆಯಿದೆ. ಸಿಬ್ಬಂದಿಗಳ ದರ್ಜೆಗಳ ಬಗ್ಗೆಯೂ ಜಿಜ್ಞಾಸೆಯಿದ್ದು ಮುಂದಿನ ದಿನಗಳಲ್ಲಿ ಗ್ರಾ.ಪಂ ಸರಕಾರದಂತೆ ಕಾರ್ಯ ನಿರ್ವಹಿಸುವಂತೆ ಮಾಡುವ ಇರಾದೆಯಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸತೀಶ್ ಪೂಜಾರಿ ವಕ್ವಾಡಿ, ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ಮಾಜಿ ಅಧ್ಯಕ್ಷ ಉದಯ ನಾಯಕ್, ಮುಖಂಡ ನಾಗರಾಜ ಆಚಾರ್ ಕೋಣಿ ಮುಂತಾದವರಿದ್ದರು.