ಚಿತ್ರದುರ್ಗ : ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ 4ರ ಆಲೂರು ಕ್ರಾಸ್ ಬಳಿ ಬೆಳಗಿನ ಜಾವ ಘಟನೆ ನಡೆದಿದೆ.
ಘಟನೆಯಲ್ಲಿ ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಸಾವನ್ನಪ್ಪಿದವರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೊರಟಿದ್ದ ಈಚರ್ ಲಾರಿಯೊಂದು ಟೈರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದೆ. ಪರಿಣಾಮ ಹಿಂದೆ ವೇಗವಾಗಿ ಬರುತ್ತಿದ್ದ ಕಾರು, ಲಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಇದರ ಜೊತೆ ಇನ್ನೂ ಎರಡು ಲಾರಿಗಳು ಪಲ್ಟಿಯಾಗಿವೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










