ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್ ಪ್ರಕರಣ ಪತ್ತೆ – ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ…

65
firstsuddi

ಬೆಂಗಳೂರು : ಕೊರೊನಾ ರೂಪಾಂತರಿ ಓಮಿಕ್ರಾನ್ ಭಾರತದಲ್ಲಿ ದಿನದಿಂದ ದಿನಕ್ಕೆ ವೇಗವಾಗಿ ಹರಡಲು ಶುರುವಾಗಿದ್ದು, ಕರ್ನಾಟಕದಲ್ಲಿ ನಿನ್ನೆ ಐದು ಹೊಸ ಓಮಿಕ್ರಾನ್ ಪ್ರಕರಣ ದಾಖಲಾಗಿವೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕು ಹಾಗೂ ದಾವಣಗೆರೆಯಲ್ಲಿ ಒಂದು ಹೊಸ ಪ್ರಕರಣ ದಾಖಲಾಗಿದೆ.

ಡಿ.22ರಂದು ಅಮೆರಿಕದಿಂದ ಬೆಂಗಳೂರಿಗೆ ದಾವಣಗೆರೆ ಮೂಲದ ಯುವತಿ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದ ವೇಳೆ ಯುವತಿಗೆ ಓಮಿಕ್ರಾನ್ ದೃಢಪಟ್ಟಿದೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಡಿಸೆಂಬರ್ 23ರಂದು ಅಮೆರಿಕದಿಂದ ಬಂದ ಮತ್ತೋರ್ವ ಯುವಕನಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ವೇಳೆ ಓಮಿಕ್ರಾನ್ ಪಾಸಿಟಿವ್ ವರದಿಯಾಗಿದೆ. ಬೆಂಗಳೂರು ಮೂಲದ ಯುವಕ ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ದುಬೈನಿಂದ ಬಂದ 53 ವರ್ಷದ ವ್ಯಕ್ತಿ ಡಿಸೆಂಬರ್23ರಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಟೆಸ್ಟಿಂಗ್ ವೇಳೆ ಇವರಿಗೆ ಪಾಸಿಟಿವ್ ಬಂದಿದೆ. ತಮಿಳುನಾಡು ಮೂಲದವರಾಗಿರುವ ಈ ವ್ಯಕ್ತಿ ಸದ್ಯ ತಿರುಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಿಂದ ಡಿ.23ರಂದು ಬೆಂಗಳೂರಿಗೆ ಆಗಮಿಸಿದ್ದ 41 ವರ್ಷದ ವ್ಯಕ್ತಿ ಇದೀಗ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಾನಾ ದೇಶದಿಂದ ಬಂದ 61 ವರ್ಷದ ವ್ಯಕ್ತಿ ಡಿಸೆಂಬರ್ 23ರಂದು ಬೆಂಗಳೂರಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಇವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೊನಾ ಸೋಂಕು ವರದಿಯಾಗಿರಲಿಲ್ಲ. ಆದರೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಇದೀಗ ಇವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.