ಬೆಂಗಳೂರು : ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ಬಂದ್ ಬದಲಿಗೆ ಪ್ರತಿಭಟನೆ ಕೈಗೊಂಡಿರುವ ಕನ್ನಡ ಪರ ಸಂಘಟನೆಗಳು ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೂ ತೆರಳುತ್ತಿದ್ದರು. ಆದರೆ, ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನಾ ಜಾಥಾವನ್ನ ಪೊಲೀಸರು ಮಧ್ಯದಲ್ಲೇ ತಡೆದಿದ್ದಾರೆ.
ನಗರದ ಕಾರ್ಪೊರೇಷನ್ ಸರ್ಕಲ್ ಬಳಿಯೇ ವಾಟಾಳ್ ನಾಗರಾಜ್, ಸಾ ರಾ ಗೋವಿಂದ್ ಕನ್ನಡ ಪರ ಸಂಘಟನೆಗಳ ಇತರೆ ಕಾರ್ಯಕರ್ತರನ್ನೂ ವಶಕ್ಕೆ ಪಡೆಯಲಾಗಿದ್ದು, ಬಿಎಂಟಿಸಿ ಬಸ್ ನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.
ರಾಜ್ಯದಲ್ಲಿ ಎಂಇಎಸ್ ನಿಷೇಧಗೊಳಿಸುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದರು. ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಂಇಎಸ್ ನಿಷೇಧಗೊಳಿಸುವುದಾಗಿ ಭರವಸೆ ನೀಡಿರುವುದರಿಂದ ಕನ್ನಡಪರ ಸಂಘಟನೆಗಳು ಬಂದ್ ಕರೆಯನ್ನು ಹಿಂಪಡೆದಿದೆ.
ನಿನ್ನೆ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿದ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು. ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡ್ತೀವಿ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆದಿದ್ದು, ಜನವರಿ 22ರೊಳಗೆ ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು. ಇಲ್ಲವಾದರಲ್ಲಿ ಜನವರಿ 22ಕ್ಕೆ ಮತ್ತೆ ಬಂದ್ ಮಾಡುವುದಾಗಿ ಕನ್ನಡ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.










