ಕೊರೊನಾ ಹೆಚ್ಚಳ – ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ…

67
firstsuddi

ಮಂಡ್ಯ : ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಜನವರಿ 31ರ ವರೆಗೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಸ್ತರಣೆ ಮಾಡಿದ್ದು, ಮತ್ತಷ್ಟು ಟಫ್ ರೂಲ್ಸ್ ಗಳನ್ನು ಜಾರಿ ಮಾಡಿದೆ.

ಈಗಾಗಲೇ ಜಿಲ್ಲಾದ್ಯಂತ 144 ಸೆಕ್ಷನ್ ವಿಸ್ತರಣೆಯಾಗಿದೆ. ಜನವರಿ ಅಂತ್ಯದವರೆಗೂ ವಿಕೇಂಡ್, ನೈಟ್ ಕರ್ಫ್ಯೂವನ್ನು ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮದುವೆ, ನಿಶ್ಚಿತಾರ್ಥ, ಬೀಗರ ಔತಣಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದರೆ, ಅಂತ್ಯಸಂಸ್ಕಾರ ಹಾಗೂ ತಿಥಿ ಕಾರ್ಯಕ್ಕೆ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ದೇವರ ದರ್ಶನಕ್ಕೆ ಒಂದು ಸಮಯಕ್ಕೆ 50 ಜನರಿಗೆ ಅವಕಾಶವಿದ್ದು, ವಿಶೇಷ ದಿನ, ಸಾರ್ವತ್ರಿಕ ರಜಾ ದಿನಗಳಲ್ಲಿ ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಾತ್ರೆ, ಗ್ರಾಮ ದೇವತೆ ಹಬ್ಬ, ಕೊಂಡೊತ್ಸವ, ಹಾಗೂ ಸಾಮೂಹಿಕ ಪ್ರಾರ್ಥನೆಗೂ ಅವಕಾಶ ಇಲ್ಲ. ಬೃಹತ್ ರ್ಯಾಲಿ, ಧರಣಿ, ಪ್ರತಿಭಟನೆಗಳನ್ನು ನಿಷೇಧ ಮಾಡಲಾಗಿದೆ. ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಚಿತ್ರಮಂದಿರ, ಸಭಾಂಗಣ, ರಂಗಮಂದಿರ, ಈಜುಕೊಳ ಹಾಗೂ ಜಿಮ್ ಕೇಂದ್ರಕ್ಕೆ 50% ಹಾಗೂ ಸ್ಪೋರ್ಟ್ಸ್, ಕ್ರೀಡಾಂಗಣ ಹಾಗೂ ಕಾಂಪ್ಲೆಕ್ಸ್ ಗೆ 50% ಅವಕಾಶ ಕಲ್ಪಿಸಲಾಗಿದೆ.

ನೈಟ್ ಕರ್ಫ್ಯೂ ವೇಳೆ ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5 ರ ವರಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ ಹೇರಲಾಗಿದೆ. ಹೋಟೆಲ್- ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.