ಕಠಿಣ ಮಾರ್ಗಸೂಚಿ ಪರಿಷ್ಕರಣೆ ಕುರಿತು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ : ಸಿಎಂ.

76
firstsuddi

ಬೆಂಗಳೂರು : ಇಂದು ಮಧ್ಯಾಹ್ನ ಕೋವಿಡ್ ತಜ್ಞರು, ಸಚಿವ ಸಂಪುಟದ ಸಹೋದ್ಯೋಗಿಗಳ ಸಭೆ ಕರೆದಿದ್ದೇನೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಸಬೇಕೋ, ಬೇಡವೋ ಎನ್ನುವುದು ಸೇರಿದಂತೆ ಕಠಿಣ ಮಾರ್ಗಸೂಚಿ ಪರಿಷ್ಕರಣೆ ಮಾಡುವ ಕುರಿತು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಕೋವಿಡ್-19 ಸಭೆ ಕುರಿತು ಮಾತನಾಡಿದ ಅವರು, ಇಂದು ಮಧ್ಯಾಹ್ನ ಸಭೆ ನಡೆಯುತ್ತದೆ, ತಜ್ಞರ ಅಭಿಪ್ರಾಯ ಅಲ್ಲಿಯೇ ವ್ಯಕ್ತವಾಗಲಿದೆ. ಈಗಾಗಲೇ ಹಲವಾರು ರೀತಿಯ ಅಭಿಪ್ರಾಯಗಳು ಬಂದಿವೆ. ಹಲವಾರು ಸಂಘ ಸಂಸ್ಥೆಗಳು ತಮ್ಮ ವ್ಯವಹಾರಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ತಜ್ಞರು ಜನತೆಯ ಆರೋಗ್ಯ ದೃಷ್ಟಿಯಿಂದ ಅವರ ಅಭಿಪ್ರಾಯವನ್ನೂ ಇಂದು ಕೊಡಲಿದ್ದಾರೆ. ಹಲವಾರು ರಾಜಕೀಯ ನಾಯಕರು, ಕೇಂದ್ರ ಸಚಿವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಸೂಚನೆಗಳನ್ನು ನೀಡಿದ್ದಾರೆ. ಅವೆಲ್ಲವನ್ನೂ ಗಮನದಲ್ಲಿಟ್ಟು ವಿಶೇಷವಾಗಿ ತಜ್ಞರ ವರದಿ, ಅಭಿಪ್ರಾಯ, ಸಲಹೆ ಆಧರಿಸಿ ಇಂದು ಒಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.